ಅಗ್ನಿಪರೀಕ್ಷೆ: ಪರಿಶುದ್ಧಳು ಎಂದಾದರೆ ಕಾದ ಕಬ್ಬಿಣವನ್ನು ಹಿಡಿ ಎಂದ ಪತಿ ಮತ್ತು ಅತ್ತೆ

ಗುರುವಾರ, 24 ಜುಲೈ 2014 (12:22 IST)
ಪತಿಯ ಜತೆ ಸಂಸಾರ ನಡೆಸಲು ಬಯಸುವುದಾದರೆ ತಾನು ಶೀಲವಂತೆ ಎಂದು ಸಾಬೀತು ಪಡಿಸಲು  ಸ್ಥಳೀಯ ಪಂಚಾಯತ್ ಸಮ್ಮುಖದಲ್ಲಿ ಕಾದು ಕೆಂಪಾದ ಕಬ್ಬಿಣದ ಸರಳನ್ನು ಹಿಡಿ ಎಂದು ಮಹಿಳೆಯೊಬ್ಬಳಿಗೆ ಬಲವಂತ ಪಡಿಸಿದ ಆರೋಪದ ಮೇಲೆ ಇಂದೋರ್ ನ್ಯಾಯಾಲಯ ಪೀಡಿತಳ ಗಂಡ, ಅತ್ತೆ  ಮತ್ತು ಇನ್ನಿಬ್ಬರ ಮೇಲೆ ಪ್ರಕರಣ ದಾಖಲಿಸಲು ಆದೇಶ ನೀಡಿದೆ. 

ಎಣ್ಣೆ ಸವರಿದ ಎಲೆಯ ಮೇಲೆ ಇಟ್ಟಿದ್ದ ಕಾದು ಕೆಂಪಗಾದ ಕಬ್ಬಿಣದ ಸರಳನ್ನು ಅಂಗೈಯಲ್ಲಿ ಹಿಡಿದು ನೀನು ಶೀಲಗೆಟ್ಟಿಲ್ಲ ಎಂಬುದನ್ನು ರುಜುವಾತುಪಡಿಸು ಎಂದು ಪೀಡಿತೆಗೆ ಒತ್ತಾಯಿಸಲಾಯಿತು ಎಂದು ಆಕೆಯ ಪರ ವಕೀಲ ಸಂತೋಷ ಕೋವಾರೆ ಹೇಳಿದ್ದಾರೆ. 
 
ಈ ಪ್ರಕರಣದ ವಿರುದ್ಧ ನೀಡಿರುವ ಅರ್ಜಿಯನ್ನು ಸ್ವೀಕರಿಸಿರುವ  ಕೋರ್ಟ್ ಭಾರತೀಯ ದಂಡ ಸಂಹಿತೆ ವಿಭಾಗ 498 ಎ ಪ್ರಕಾರ ನೊಂದ ಮಹಿಳೆಯ ಗಂಡ, ಅತ್ತೆ ಮತ್ತು ಇಬ್ಬರು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಬಂಧಿಸಿದ ಪೋಲಿಸ್ ಠಾಣೆಗೆ ಆದೇಶ ನೀಡಿದೆ. 
 
ಕಂಜಾರ ಸಮುದಾಯಕ್ಕೆ ಸೇರಿರುವ ಪೀಡಿತ  ಮಹಿಳೆ 2007ರಲ್ಲಿ ವಿವಾಹವಾಗಿದ್ದಳು.  ಆಗಿನಿಂದ ಆಕೆಯ ಗಂಡ ಮತ್ತು ಅತ್ತೆ ವರದಕ್ಷಿಣೆ ರೂಪದಲ್ಲಿ 2 ಲಕ್ಷ ರೂಪಾಯಿ ತರುವಂತೆ ಆಕೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದರು. ನಂತರ ಆಕೆಯ ನಡತೆಯ ಬಗ್ಗೆ ಅನುಮಾನ ಪಡಲು ಆರಂಭಿಸಿದ ಅವರು ನೀನು ಪರಿಶುದ್ಧಳು ಎಂದು  ಸ್ಥಳೀಯ ಗ್ರಾಮಪಂಚಾಯತ್ ಮುಂದೆ ಸಾಬೀತು ಪಡಿಸು ಎಂದು ವರಾತ ತೆಗೆದರು.
 
ಆದರೆ ಅದನ್ನು ಆಕೆಯ ತಂದೆ-ತಾಯಿ ವಿರೋಧಿಸಿದಾಗ ಆಕೆಯ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಯಿತು. ಕಳೆದ ಫೆಬ್ರವರಿ ತಿಂಗಳಿಂದ ಆಕೆಯ ಕುಟುಂಬ ಯಾವ ಕಾರ್ಯಕ್ರಮಕ್ಕೂ ಭಾಗವಹಿಸದಂತಾಗಿದೆ ಮತ್ತು ಆಕೆ ತನ್ನ ತವರಿಗೂ ಹೋಗದಂತಾಗಿದೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಕಂಜಾರ್ ಸಮುದಾಯದ ರಾಜ್ಯಾಧ್ಯಕ್ಷೆ ಶಶಿ ಖಟಾಬಿಯಾ ಪಂಚಾಯತ್ ಆದೇಶ ಅರ್ಥಹೀನ ಅಗ್ನಿಪರೀಕ್ಷೆ ಯಂತಹ ರೂಢಿಗಳು ಭೂತಕಾಲಕ್ಕೆ ಸಂಬಂಧಿಸಿದ ಆಚರಣೆಗಳು, ಆಧುನಿಕ ಕಾಲದಲ್ಲಿ ಅವು ಪ್ರಸ್ತುತತೆಯನ್ನು ಪಡೆದಿಲ್ಲ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ