ಬಿಹಾರ್ ಚುನಾವಣೆ: ನಿತೀಶ್ ಕುಮಾರ್, ಲಾಲು ಯಾದವ್ ವಿರುದ್ಧ ಅಸಾದುದ್ದೀನ್ ವಾಗ್ದಾಳಿ

ಸೋಮವಾರ, 12 ಅಕ್ಟೋಬರ್ 2015 (21:30 IST)
ಸೀಮಾಂಚಲ್ ಪ್ರದೇಶ ಹಿಂದುಳಿಯುವಿಕೆಗೆ ಜನತಾ ಪರಿವಾರವೇ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ತಮ್ಮ ಪಕ್ಷ ಅಲ್ಪಸಂಖ್ಯಾತರ ಮತ್ತು ದುರ್ಬಲರ ಏಳಿಗೆಗಾಗಿ ಶ್ರಮಿಸಲಿದೆ ಎಂದು ಹೇಳಿದ್ದಾರೆ. 
 
ಕಿಶನ್‌ಗಂಜ್‌ನಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಓವೈಸಿ, ಸೀಮಾಂಚಲ್ ಪ್ರದೇಶದ ಅಧೋಗತಿಗೆ ಕಾಂಗ್ರೆಸ್, ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಮತ್ತು ಬಿಹಾರ್ ಸಿಎಂ ನಿತೀಶ್ ಕುಮಾರ್ ನೇರವಾಗಿ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.
 
ಜಾತ್ಯಾತೀತ ಮೈತ್ರಿಕೂಟದ ನಾಯಕರು ಹಲವು ದಶಕಗಳಿಂದ ಸೀಮಾಂಚಲ್ ಪ್ರದೇಶದ ಜನತೆಗೆ ನ್ಯಾಯ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ ಎಂದು ಕಿಡಿಕಾರಿದರು. 
 
ಎನ್‌ಡಿಎ ಸರಕಾರದ ರಿಮೋಟ್ ಕಂಟ್ರೋಲ್ ಸಂಘಟನೆಯಾದ ಆರೆಸ್ಸೆಸ್, ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ರದ್ದುಗೊಳಿಸುವ ಸಂಚು ನಡೆಸುತ್ತಿದೆ. ಸಂಘ ಪರಿವಾರ ಹೇಳಿದಂತೆ ಕೇಸರಿ ಪಕ್ಷ ನಡೆಯುತ್ತದೆ ಎಂದು ಗುಡುಗಿದರು.
  
ಆರೆಸ್ಸೆಸ್ ಬಿಜೆಪಿಯ ಪಿತೃಪಕ್ಷವಾಗಿದ್ದರಿಂದ ಸಂಘದ ನಾಯಕರ ಅಣತಿಯಂತೆ ಬಿಜೆಪಿ ನಡೆಯುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ