ಚಿನ್ನದ ಕಳ್ಳಸಾಗಣೆ ಮಾಡಿ ಸಿಕ್ಕಿ ಬಿದ್ದ ಏರ್ ಇಂಡಿಯಾ ಉದ್ಯೋಗಿಗಳು

ಗುರುವಾರ, 31 ಜುಲೈ 2014 (18:09 IST)
ಕಳೆದ  ನಾಲ್ಕು ವರ್ಷಗಳಿಂದ ಚಿನ್ನ ಕಳ್ಳಸಾಗಾಣೆಯಲ್ಲಿ ಭಾಗಿಯಾಗಿದ್ದ ಏರ್ ಇಂಡಿಯಾದ ಉದ್ಯೋಗಿಗಳ 13 ಪ್ರಕರಣಗಳನ್ನು ಹಿರಿಯ ಅಧಿಕಾರಿಗಳು ಬೇಧಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವರು ಬಹಿರಂಗ ಪಡಿಸಿದ್ದಾರೆ. 

ಚೀನಾದ ನಂತರ ಚಿನ್ನದ ಅತಿದೊಡ್ಡ ಖರೀದಿದಾರ ಆಗಿರುವ ಭಾರತ ಕಳೆದ ವರ್ಷ ದಾಖಲೆಯ 10 ರಷ್ಟು ಆಮದು ಸುಂಕವನ್ನು ವಿಧಿಸಿತ್ತು ಮತ್ತು ಚಿನ್ನದ ಪ್ರತಿಯೊಂದು ರಫ್ತಿನ ವಹಿವಾಟು ಹೆಚ್ಚಿಸಲು ರಫ್ತು ತೆರಿಗೆ ದರದಲ್ಲಿ ಹೆಚ್ಚಳ ಕಡ್ಡಾಯಗೊಳಿಸಿತ್ತು.  
 
ಇದು ಕಳ್ಳಸಾಗಾಣಿಕೆಯಲ್ಲಿ ಏರಿಕೆಯಾಗಲು ಕಾರಣವಾಯಿತು, ಕೆಲವು ಉದ್ಯೋಗಿಗಳು ಚಿನ್ನವನ್ನು ಅಕ್ರಮವಾಗಿ ತರುತ್ತಿದ್ದರು, ಮತ್ತೆ ಕೆಲವರು ವಿಮಾನನಿಲ್ದಾಣದ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಚಿನ್ನದ ಗಟ್ಟಿಗಳನ್ನು ನುಂಗುತ್ತಿದ್ದರು. 
 
ಈ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಏರ್ ಇಂಡಿಯಾ ಉದ್ಯೋಗಿಗಳ ವಿರುದ್ಧ ಶಿಸ್ತಿನ ಕ್ರಮವನ್ನು  ಕೈಗೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಜಿ ಎಮ್ ಸಿದ್ದೇಶ್ವರ ತಿಳಿಸಿದ್ದು ಎಷ್ಟು ಪ್ರಮಾಣದ ಬಂಗಾರ ಕಳ್ಳ ಸಾಗಾಣಿಕೆಯಾಗಿದೆ ಎಂಬುದರ ಕುರಿತು ಮತ್ತು ಇತರ ಮಾಹಿತಿಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. 
 
ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಅಕ್ರಮವಾಗಿ ಭಾರತ ಪ್ರವೇಶಿಸಿದ ಚಿನ್ನ ಅಂದಾಜು 2.34 ಟನ್. ಆದರೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಅಂದಾಜು 200-250 ಟನ್ ಚಿನ್ನ ಅಕ್ರಮವಾಗಿ ಭಾರತಕ್ಕೆ ಬಂದಿದೆ. 

ವೆಬ್ದುನಿಯಾವನ್ನು ಓದಿ