ಚುನಾವಣೆ ಗೆದ್ದು ತಂದೆಗೆ ಉಡುಗೊರೆ; ಭಾವುಕರಾದ ಅಖಿಲೇಶ್

ಶನಿವಾರ, 31 ಡಿಸೆಂಬರ್ 2016 (12:56 IST)
ಉತ್ತರ ಪ್ರದೇಶದಲ್ಲಿ ಹೊಗೆಯಾಡುತ್ತಿದ್ದ ರಾಜಕೀಯ ವೈಷಮ್ಯ ಈಗ ಜ್ವಾಲಾಮುಖಿಯಾಗಿ ಸ್ಪೋಟವಾಗಿದ್ದು ತಮ್ಮ ತಂದೆ, ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಂದ ಅಮಾನತುಗೊಂಡಿರುವ ಅಖಿಲೇಶ್ ಯಾದವ್ ತಮ್ಮ ನಿವಾಸದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಸಭೆಯಲ್ಲಿ ಇನ್ನೊಂದೆಡೆ ಮುಲಾಯಂ ಸಹ ಸಂಸದೀಯ ಸಭೆ ಕರೆದಿದ್ದಾರೆ. 
ಶಾಸಕರ ಮತ್ತು ಎಮ್‌ಎಲ್‌ಸಿಗಳ ಜತೆಗಿನ ಸಭೆಯಲ್ಲಿ ಅಖಿಲೇಶ್ ಭಾವುಕರಾಗಿದ್ದು ನಾನು ತಂದೆಯಿಂದ ದೂರವಾಗಿಲ್ಲ. ಉತ್ತರ ಪ್ರದೇಶ ಚುನಾವಣೆಯನ್ನು ಗೆದ್ದು ಅಪ್ಪನಿಗೆ ಉಡುಗೊರೆ ಕೊಡುವೆ ಎಂದು ಕಣ್ಣು ತುಂಬಿಕೊಂಡು ಹೇಳಿದ್ದಾರೆ. 
 
ಉಚ್ಚಾಟನೆಗೊಂಡಿರುವ ಅಖಿಲೇಶ್ ಯಾದವ್ ಅವರಿಗೆ ಪಕ್ಷದೊಳಗಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪಕ್ಷದ 224 ಶಾಸಕರಲ್ಲಿ 190 ಶಾಸಕರು ಮತ್ತು 30 ಎಮ್ಎಲ್‌ಸಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಬೆಂಬಲಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಈ ರೀತಿ ಭಾರಿ ಬೆಂಬಲ ಪಡೆಯುವ ಮೂಲಕ ಅಖಿಲೇಶ್ ತಂದೆಗೆ ಸೆಡ್ಡು ಹೊಡೆದಿದ್ದಾರೆ. ಇದರಿಂದ ಮುಲಾಯಂ ಸಿಂಗ್ ಯಾದವ್ ಅವರಿಗೆ ಭಾರಿ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡೆಸುವ ಸಂದರ್ಭ ಬಂದರೆ ಕಾಂಗ್ರೆಸ್ ಬೆಂಬಲದೊಂದಿಗೆ ಅಖಿಲೇಶ್ ಬಹುಮತ ಸಾಬೀತು ಪಡಿಸುವುದು ನಿಶ್ಚಿತ. 
 
ಮುಲಾಯಂ ಕರೆದಿರುವ ಸಂಸದೀಯ ಸಭೆಯಲ್ಲಿ  ಕೇವಲ 15 ಶಾಸಕರು ಪಾಲ್ಗೊಂಡಿದ್ದು ಉಳಿದ 50 ಜನರು ಟಿಕೆಟ್ ಆಕಾಂಕ್ಷಿಗಳು ಎಂದು ಹೇಳಲಾಗುತ್ತಿದೆ. ತಂದೆ ವಿರುದ್ಧ ಮಗ ತೊಡೆತಟ್ಟಿ ನಿಂತಿದ್ದು ಈಗಾಗಲೇ ಮಗನನ್ನು ಪಕ್ಷದಿಂದ ಉಚ್ಚಾಟಿಸಿರುವ ಮುಲಾಯಂ ಸಿಂಗ್ ಯಾದವ್ ಅವರಿಗೆ ಮುಖಭಂಗವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. 
 
ಇನ್ನೊಂದೆಡೆ ಮುಲಾಯಂ ನೆಂಟ, ಬಿಹಾರ್ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅಪ್ಪಮಗನ ಭಿನ್ನಾಭಿಪ್ರಾತಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. 
 

ವೆಬ್ದುನಿಯಾವನ್ನು ಓದಿ