ರಾಹುಲ್ ಜತೆ ಅಖಿಲೇಶ್ ಸೈಕಲ್ ಸವಾರಿ?

ಮಂಗಳವಾರ, 10 ಜನವರಿ 2017 (10:20 IST)
ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಸಿಗುವ ಮುನ್ನವೇ ಮುನ್ನವೇ  ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮುಂದಾಗಿದ್ದಾರೆ. ಇಂದು ಅವರು ವಿದೇಶ ಪ್ರವಾಸದಿಂದ ಹಿಂತಿರುಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಲಿದ್ದು, ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಮೈತ್ರಿ ಕುರಿತು ಯುವ ನಾಯಕರು ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಜತೆಯಾಗಿ ಯುದ್ಧವನ್ನೆದುರಿಸುವ ಕುರಿತು ಘೋಷಣೆಯಾಗುವ ಸಾಧ್ಯತೆಗಳು ಸಹ ಇವೆ.ಯಾದವ ಪರಿವಾರದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಶೀತಲ ಯುದ್ಧದಲ್ಲಿ ಅಖಿಲೇಶ್ ಬಣ ಮೇಲುಗೈ ಸಾಧಿಸುತ್ತಿದ್ದಂತೆ, ಹಲವು ನಾಯಕರು ಕೈ ಜತೆ ಕೈ ಮಿಲಾಯಿಸಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. 
 
ಒಮ್ಮೆ ಮೈತ್ರಿಯಾಗಿದ್ದೇ ಆದರೆ, ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್​ಗೆ ಹೆಚ್ಚೆಂದರೆ 100 ಸೀಟುಗಳನ್ನು ನೀಡಬಹುದು ಎನ್ನುತ್ತವೆ ಮೂಲಗಳು.
 
ಇನ್ನೊಂದೆಡೆ, ತಮ್ಮ ಪುತ್ರ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ, ನಮ್ಮ ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
 
ಸಹೋದರ ಶಿವಪಾಲ್ ಸಿಂಗ್ ಮತ್ತು ಆಪ್ತ ಅಮರ್ ಸಿಂಗ್ ಜತೆ ನಿನ್ನೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಮ್ಮ ಪಕ್ಷದಲ್ಲಿ ಒಗ್ಗಟ್ಟಿದ್ದು, ಸದ್ಯದಲ್ಲಿ ಜೊತೆಯಾಗಿ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ