ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಾವಿಯಲ್ಲಿ ದೂಡಿ ಪರಾರಿಯಾದ ಕಾಮುಕ

ಸೋಮವಾರ, 21 ಜುಲೈ 2014 (15:17 IST)
17 ವರ್ಷದ ಅಪ್ರಾಪ್ತಳ ಮೇಲೆ ಅತ್ಯಾಚಾರ ನಡೆಸಿ ಬಾವಿಯಲ್ಲಿ ದೂಡಿ ಹಾಕಿದ ಭೀಕರ ಅಮಾನುಷ ಕೃತ್ಯ  ರಾಜಸ್ಥಾನದಲ್ಲಿ ವರದಿಯಾಗಿದ್ದು,  15 ಘಂಟೆಗಳ ಬಾವಿಯಲ್ಲಿದ್ದ ಅವಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ. 

ಭಿಲ್ವಾರಾ ನಗರದಲ್ಲಿ ಘಟನೆ ನಡೆದಿದ್ದು, ಹದಿ ವಯಸ್ಸಿನ ಆಕೆ ತನ್ನ ನೆರೆಮನೆಯಾತನಿಂದ ಈ ದುಷ್ಕೃತ್ಯಕ್ಕೆ ಒಳಗಾಗಿದ್ದಾಳೆ. ಆಕೆ ಹೊಲಕ್ಕೆ ಹೋದ ಸಂದರ್ಭದಲ್ಲಿ ಆಕೆಯ ಮೇಲೆರಗಿ ಅತ್ಯಾಚಾರ ಎಸಗಿದ  ಆತ  ನಂತರ ಅಲ್ಲೇ ಹತ್ತಿರವಿದ್ದ ಬಾವಿಯಲ್ಲಿ ಆಕೆಯನ್ನು ದೂಡಿ ಹಾಕಿ ಕೊಲ್ಲಲೆತ್ನಿಸಿದ್ದಾನೆ. 
 
ಆದರೆ ಮರುದಿನ ಬೆಳಿಗ್ಗೆ ಆಕೆಯ ಕಿರುಚಾಟವನ್ನು ಕೇಳಿದ  ಯಾರೋ ಒಬ್ಬರು ಅಲ್ಲಿಗೆ ಬಂದು ನೋಡಲಾಗಿ ಆಕೆ ಬಾವಿಯಲ್ಲಿರುವುದು ತಿಳಿದು ಬಂತು. ನಂತರ ಸ್ಥಳೀಯರೆಲ್ಲರೂ ಸೇರಿ ಆಕೆಯನ್ನು ಬಾವಿಯಿಂದ ಎತ್ತಿದ್ದಾರೆ. 
 
ಆರೋಪಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯತ್ನದ ಪ್ರಕರಣ ದಾಖಲಾಗಿದ್ದು,  ನಾಪತ್ತೆಯಾಗಿರುವ ಆತನ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. 
 
ಇಡೀ ರಾತ್ರಿ ನಾನು ನೀರಿನಲ್ಲಿ ಇದ್ದೆ. ಬಾವಿಯಲ್ಲಿ ಅಳವಡಿಸಲಾಗಿದ್ದ  ಮೋಟಾರ್ ಹಿಡಿದುಕೊಂಡು ನೀರಿನಲ್ಲಿ ಮುಳುಗದಂತೆ ನನ್ನನ್ನು ನಾನು ರಕ್ಷಿಸಿಕೊಂಡೆ. ಬೆಳಿಗ್ಗೆ ಜನರು ನನ್ನನ್ನು ಮೇಲಕೆತ್ತಿದರು ಎಂದು ಆಕೆ ತನ್ನ ಕರುಣಾಜನಕ ಕತೆಯ ವಿವರಣೆ ನೀಡುತ್ತಾಳೆ. ಇಡೀ ರಾತ್ರಿ ಬಹಳ ಮಳೆಯಾಗುತ್ತಿದ್ದಿದ್ದರಿಂದ  ಆಕೆಯ ಕೂಗು ಯಾರಿಗೂ ಕೇಳಿಸಲಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ