ಫೇಸ್‌ಬುಕ್ ಮಗನ ಮದುವೆಗೆ ಆಗಮಿಸಿದ ಅಮೇರಿಕ ಅಮ್ಮ

ಸೋಮವಾರ, 1 ಫೆಬ್ರವರಿ 2016 (11:56 IST)
ಭಾವನಾಧೀನಂ ಜಗತ್ ಸರ್ವಂ ಎನ್ನುತ್ತಾರೆ. ಸಂಬಂಧಗಳೆಂದರೆ ಕೇವಲ ರಕ್ತ ಸಂಬಂಧಗಳಷ್ಟೇ ಅಲ್ಲ. ಭಾವನೆಗಳ ಮೇಲೆ ಕಟ್ಟಿಕೊಂಡ ಸಂಬಂಧಗಳು ರಕ್ತ ಸಂಬಂಧಗಳಿಗಿಂತಲೂ ಹೆಚ್ಚು ಪ್ರಭಾವಶಾಲಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದೊಂದು ಫೇಸ್‌ಬುಕ್ ಅಮ್ಮ ಮಗನ ವಾತ್ಸಲ್ಯದ ಕಹಾನಿ. ಫೇಸ್‌ಬುಕ್ ಮೇಲೆ ತಾಯಿ-ಮಗನ ಸಂಬಂಧ ಬೆಳೆಸಿಕೊಂಡ 60 ವರ್ಷದ ಅಮೇರಿಕನ್ ಮಹಿಳೆ ಮತ್ತು 28 ವರ್ಷದ ಭಾರತೀಯ ಹುಡುಗನ ಸುಂದರ ಕಥೆ ಇದು. 


 
ಗೋರಕ್‌ಪುರದ ನಿವಾಸಿ 28 ವರ್ಷದ ಕೃಷ್ಣ ಮೋಹನ್ ತ್ರಿಪಾಠಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ 60 ವರ್ಷದ ದೇಬ್ ಮಿಲ್ಲರ್ ಎಂಬ ಮಹಿಳೆಯ ಪರಿಚಯವಾಗಿತ್ತು. ಪರಷ್ಪರ ನೋವು- ನಲಿವನ್ನು ಹಂಚಿಕೊಂಡಿದ್ದಾರೆ. ಚಿಕ್ಕ ಪ್ರಾಯದಲ್ಲೇ ಅಮ್ಮನನ್ನು ಕಳೆದುಕೊಂಡಿದ್ದ ಕೃಷ್ಣ ಮೋಹನ್‌ಗೆ ಕ್ಯಾಲಿಫೋರ್ನಿಯಾ ನಿವಾಸಿಯಾದ ಮಹಿಳೆ ಅಮ್ಮನ ಸ್ಥಾನವನ್ನು ತುಂಬಿದ್ದಾಳೆ. 
 
ಫೇಸ್‌ಬುಕ್ ತಾಯಿಯ ಮಮತೆಯ ಕೃಷ್ಣ ತನ್ನ ವಿವಾಹಕ್ಕೆ ಬರುವಂತೆ ಆಕೆಯನ್ನು ಆಮಂತ್ರಿಸಿದ್ದಾನೆ. ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದ ತಾಯಿಯಿಂದ ಕಳೆದ ಜನವರಿ 20 ರಂದು ಬಂದ ದೂರವಾಣಿ ಕರೆ ಆತ ಊಹಿಸದಿದ್ದ ಸಂತೋಷವನ್ನು ತಂದಿತ್ತು. ನಾನು ದೆಹಲಿಯನ್ನು ತಲುಪಿದ್ದು ಗೋರಕ್‌ಪುರ್ ರೈಲಿಗಾಗಿ ಕಾಯುತ್ತಿದ್ದೇನೆ ಎಂದು ಆಕೆ ಮಗನಿಗೆ ಹೇಳಿದ್ದಾಳೆ. 
 
ತಕ್ಷಣ ಗೋರಕ್‌ಪುರ್ ರೈಲು ನಿಲ್ದಾಣಕ್ಕೆ ಧಾವಿಸಿದ ಕೃಷ್ಣನ ಸಂಬಂಧಿಗಳು ಆಕೆಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.
 
ಕೃಷ್ಣನ ಮದುವೆ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯದಂತೆ ಸಿಂಗರಿಸಿಕೊಂಡು ಸೀರೆಯನ್ನು ಸಹ ಉಟ್ಟಿದ್ದ ದೇಬ್ 25 ಲಕ್ಷ ಮೌಲ್ಯದ ಚಿನ್ನದಾಭರಣ ಮತ್ತು 125 ವರ್ಷ ಹಳೆಯ ಉಂಗುರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 

 
ಕೃಷ್ಣ ಕುರಿತು ದೇಬ್ ಹೇಳುವುದು ಹೀಗೆ, ನನಗೆ ಮಕ್ಕಳಿರಲಿಲ್ಲ. ಕೃಷ್ಣನ ಜತೆ ಮಾತನಾಡಿದ ಬಳಿಕ ದೇವರು ನನ್ನ ಕೋರಿಕೆಯನ್ನು ಪೂರೈಸಿದ್ದಾನೆ ಎನ್ನಿಸಿತು. ಆತ ಬಹಳ ಒಳ್ಳೆಯ ಹುಡುಗ. ಆತನ ಎಲ್ಲಾ ಆಶೋತ್ತರಗಳು ಸಿದ್ಧಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. 
 
ಸದ್ಯ ಅವಧ್ ವಿಶ್ವವಿದ್ಯಾಲಯದಲ್ಲಿ ಎಮ್‌ಎಸ್‌ಸಿ ಮಾಡುತ್ತಿರುವ ಕೃಷ್ಣಾ ವಕೀಲನಾಗುವ ಗುರಿಯನ್ನು ಹೊಂದಿದ್ದಾನೆ. ಶನಿವಾರ ನೇಹಾ ಎಂಬಾಕೆಯ ಜತೆ ಸಪ್ತಪದಿ ತುಳಿದ ಆತ ಅಮ್ಮ ನಮ್ಮನ್ನು ಅಮೇರಿಕಾಕ್ಕೆ ಆಮಂತ್ರಿಸಿದ್ದಾರೆ. ಸದ್ಯ ನಾವಿಬ್ಬರು ಅಲ್ಲಿಗೆ ಹೋಗಲಿದ್ದೇವೆ ಎನ್ನುತ್ತಾನೆ. 
 
ಗೋಲ್ಡನ್ ಬನಾರಸ್ ಸೀರೆಯಲ್ಲಿ ಮಿಂಚುತ್ತಿದ್ದ ದೇಬ್ ತಾನು ಭಾರತದ ಜತೆ ಪ್ರೀತಿಯಲ್ಲಿ ಬಿದ್ದಿದ್ದೇನೆ. ನಾನು ಟಿವಿಯಲ್ಲಿ ಸದಾ ಭಾರತೀಯ ಮಹಿಳೆಯರನ್ನು ನೋಡುತ್ತಿದ್ದೆ. ಅವರು ಸೀರೆಯನ್ನು ಹೇಗೆ ಸಂಭಾಳಿಸಿಕೊಳ್ಳುತ್ತಾರೆ ಎಂಬ ಕುತೂಹಲ ನನಗಿತ್ತು. ಇದೊಂದು ವಿನಮ್ರ ಉಡುಗೆ. ಉಡುಗೊರೆಯಾಗಿ ಡಜನ್‌ಗಟ್ಟಲೆ ಸಾರಿಯನ್ನು ತೆಗೆದುಕೊಂಡು ಮರಳುತ್ತಿದ್ದೇನೆ. ಮಗನ ಜತೆಯಲ್ಲಿ ತಾಜ್ ಮಹಲ್ ನೋಡಲು ನಾನು ಮತ್ತೆ ಬರುತ್ತೇನೆ ಎಂದು ಮುಗುಳ್ನಗುತ್ತಾರೆ. 
 

ವೆಬ್ದುನಿಯಾವನ್ನು ಓದಿ