ಮಹಾರಾಷ್ಟ್ರ: ಸಚಿವ ಸಂಪುಟ ವಿಸ್ತರಣೆಗೆ ದೇವೇಂದ್ರ ಫಡ್ನವೀಸ್ ಗ್ರೀನ್ ಸಿಗ್ನಲ್

ಸೋಮವಾರ, 6 ಜುಲೈ 2015 (16:15 IST)
ಭಾರತೀಯ ಸಂವಿಧಾನದಂತೆ ರಾಜ್ಯದ ಸಚಿವ ಸಂಪುಟದಲ್ಲಿ ಒಟ್ಟು 42 ಸಚಿವ ಸ್ಥಾನಗಳ ಭರ್ತಿಗೆ ಅವಕಾಶವಿರುತ್ತದೆ. ಇದೀಗ ಮುಖ್ಯಮಂತ್ರಿ ದೇವೇಂದ್ರ ಫಡ್ನನೀಸ್ ಸಂಪುಟದಲ್ಲಿ ಬಿಜೆಪಿ 20 ಮತ್ತು ಶಿವಸೇನೆಯ 10 ಸಚಿವರಿರುವುದರಿಂದ ಉಳಿದ 12 ಸ್ಥಾನಗಳ ಭರ್ತಿಗೆ ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.  
 
ಸಚಿವರ ಅವ್ಯವಹಾರ ಆರೋಪಗಳಿಂದಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳಿಂದ ಫಡ್ನವೀಸ್ ಸರಕಾರ ಭಾರಿ ಟೀಕೆಗೊಳಗಾಗಿದೆ. ಮಂಗಳವಾರದಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡಾ ಮುಂಬೈಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಗರಿಗೆದರಿದೆ. ಮುಂಗಾರು ಅಧಿವೇಶನಕ್ಕೆ ಮುನ್ನ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.     
 
ಕಳೆದ 2014ರ ಡಿಸೆಂಬರ್ 5 ರಂದು ದೇವೇಂದ್ರ ಫಡ್ನವೀಸ್ ಸರಕಾರ ಅಧಿಕಾರಕ್ಕೆ ಬಂದ ನಂತರ 20 ಬಿಜೆಪಿ ಶಾಸಕರು ಮತ್ತು 10 ಶಿವಸೇನೆ ಶಾಸಕರಿಗೆ ಸಚಿವ ಸ್ಥಾನದ ಅವಕಾಶ ನೀಡಲಾಗಿತ್ತು.
 
ಬಿಜೆಪಿಯ ಮಿತ್ರ ಪಕ್ಷಗಳಾದ ರಾಷ್ಟ್ರೀಯ ಸಮಾಜ ಪಾರ್ಟಿ, ಆರ್‌ಪಿಐ, ಸ್ವಾಭಿಮಾನಿ ಶೇಟ್‌ಕಾರಿ ಸಂಘಟನಾ ಮತ್ತು ವಿನಾಯಕ್ ಮೆಟೆ ನೇತೃತ್ವದ ಶಿವಸಂಗ್ರಾಮ್ ಪಕ್ಷಗಳು ಕೂಡಾ ಸಚಿವ ಸಂಪುಟದಲ್ಲಿ ಸ್ಥಾನಪಡೆಯಲು ಹರಸಾಹಸ ನಡೆಸುತ್ತಿವೆ. 
 
ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹೈಕಮಾಂಡ್, ಚತ್ತೀಸ್‌ಗಢ್ ಸಂಸದ ಸರೋಜ್ ಪಾಂಡೆಯವರನ್ನು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಿಸಿದೆ. ಸದ್ಯ ಅಮೆರಿಕ ಪ್ರವಾಸದಲ್ಲಿರುವ ದೇವೇಂದ್ರ ಫಡ್ನವೀಸ್ ನಾಳೆ ಮುಂಬೈಗೆ ಮರಳುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.  
 

ವೆಬ್ದುನಿಯಾವನ್ನು ಓದಿ