ವಿಧಾನಸಭೆ ಚುನಾವಣೆ ರಣತಂತ್ರ: ಉ.ಪ್ರದೇಶ ಬಿಜೆಪಿ ನಾಯಕರನ್ನು ಭೇಟಿಯಾದ ಅಮಿತ್ ಶಾ

ಸೋಮವಾರ, 8 ಫೆಬ್ರವರಿ 2016 (21:15 IST)
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶದ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 
 
ಉತ್ತರಪ್ರದೇಶದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿರ್ಧಾರ ಹೈಕಮಾಂಡ್‌ಗೆ ಹೊಸ ಸವಾಲನ್ನು ತಂದಿದೆ.
 
ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್ ಬಾಜ್‌ಪೈ ಮತ್ತು ಹಿರಿಯ ನಾಯಕ ಓಂ ಪ್ರಕಾಶ್ ಮಾಥುರ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ ಅಮಿತ್ ಶಾ ಮಂಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
 
ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಪಕ್ಷವನ್ನು ಗೆಲ್ಲಿಸಲೇಬೇಕು ಎನ್ನುವ ಪಣತೊಟ್ಟಿರುವ ಅಮಿತ್ ಶಾ, ಪಂಜಾಬ್ ನಾಯಕರನ್ನು ಈಗಾಗಲೇ ಭೇಟಿ ಮಾಡಿದ್ದು, ಉತ್ತರಾಖಂಡ ಮತ್ತು ಹಿಮಾಚಲ್ ಪ್ರದೇಶದ ಬಿಜೆಪಿ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. 
 
ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಭಾರಿ ಜಯಬೇರಿ ಬಾರಿಸಿದ್ದ ಬಿಜೆಪಿಗೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶಾ ಶ್ರಮಿಸುತ್ತಿದ್ದಾರೆ.  
 

ವೆಬ್ದುನಿಯಾವನ್ನು ಓದಿ