ದೇಶದ ಎರಡನೇ ಪ್ರಭಾವಿ ರಾಜಕಾರಣಿ ಎನಿಸಿಕೊಂಡ ಅಮಿತ್ ಶಾ

ಮಂಗಳವಾರ, 21 ಅಕ್ಟೋಬರ್ 2014 (12:40 IST)
ಮಹಾರಾಷ್ಟ್ರ ಮತ್ತು ಹರಿಯಾಣಾ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಘನತೆ ಸಹ ದಿಢೀರನೆ ಎತ್ತರಕ್ಕೇರಿದ್ದು, ನರೇಂದ್ರ ಮೋದಿ ನಂತರ ಬಿಜೆಪಿಯ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಅವರು ಹೊರಹೊಮ್ಮಿದ್ದಾರೆ.
 
ಅವರೀಗ ದೇಶದ ಎರಡನೇ ಪ್ರಭಾವಿ ರಾಜಕಾರಣಿ. ನರೇಂದ್ರ ಮೋದಿ ನಂತರದ ಸ್ಥಾನ ಅವರ ಅತ್ಯಾಪ್ತ ಅಮಿತ್ ಶಾರವರದಾಗಿದೆ.ದೇಶದ ಪ್ರಭಾವಿ ರಾಜಕಾರಣಿ ಪಟ್ಟಿಯಲ್ಲಿ ನಮೋ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
 
ಕಳೆದ ಭಾನುವಾರ ಎರಡು ರಾಜ್ಯಗಳಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಿಜೆಪಿ ಗೆಲುವಿಗೆ ಮೋದಿ ಅಲೆ ಜತೆ, ಅಮಿತ್ ಶಾ ನೇತೃತ್ವವೂ ಕಾರಣ ಎಂಬುದು ಕಮಲ ಪಾಳೆಯದ ಅಭಿಪ್ರಾಯ. 
 
ಕಳೆದ ಬಾರಿ ಹರಿಯಾಣಾದಲ್ಲಿ 4 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಬಿಜೆಪಿ, ಈ ಬಾರಿ ಫೀನಿಕ್ಸ್‌ನಂತೆ ಎದ್ದು ನಿಂತಿರುವುದರ ಹಿಂದೆ ಶಾ ತಂತ್ರಗಾರಿಕೆ ಕೆಲಸ ಮಾಡಿದೆ. ಮಹಾರಾಷ್ಟ್ರದಲ್ಲಿ  ಒಬ್ಬಂಟಿಯಾಗಿ ಚುನಾವಣೆಯನ್ನೆದುರಿಸುವ ಸಮರ್ಪಕ ನಿರ್ಣಯದ ಹಿಂದೆಯೂ ಶಾರವರ ತಲೆ ಕೆಲಸ ಮಾಡಿದೆ. 
 
ಎರಡು ರಾಜ್ಯಗಳಲ್ಲಿ ಕಮಲ ಅರಳಲು ಮೋದಿ- ಶಾ ಜೋಡಿಯ ಮೋಡಿಯೇ ಕಾರಣ ಎಂಬುದನ್ನು ರಾಜಕೀಯ ವಿಶ್ಲೇಷಕರು ಕೂಡ ಒಪ್ಪುತ್ತಿದ್ದಾರೆ. ಈ ಗೆಲುವು ಶಾರವರ ಜನಪ್ರಿಯತೆಯನ್ನು ಸಹ ಹೆಚ್ಚಿಸಿದ್ದು, ಅವರನ್ನೀಗ ದೇಶದ ಪ್ರಭಾವಿ ರಾಜಕಾರಣಿಗಳ ಸಾಲಲ್ಲಿ ಮೋದಿಯವರ ಬೆನ್ನಿಗೆ ತಂದು ನಿಲ್ಲಿಸಿದೆ. 

ವೆಬ್ದುನಿಯಾವನ್ನು ಓದಿ