ತಮಿಳುನಾಡಿನ ವೆಲ್ಲೂರ್‌ನಲ್ಲಿ ಸಿಎಂ ಜಯಲಲಿತಾ ದೇವಾಲಯ ನಿರ್ಮಾಣ

ಸೋಮವಾರ, 29 ಫೆಬ್ರವರಿ 2016 (17:57 IST)
ಮುಖ್ಯಮಂತ್ರಿ ಜಯಲಲಿತಾ ಬೆಂಬಲಿಗರು ವೆಲ್ಲೂರು ಬಳಿ "ಅಮ್ಮಾ" (ಜಯಲಲಿತಾ) ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ.
 
ವಿರುಗುಂಬಾಕಂ ವಿಧಾನಸಭಾ ಕ್ಷೇತ್ರದ ಎಂಜಿಆರ್ ಯುವ ವಿಭಾಗದ ಜಂಟಿ ಕಾರ್ಯದರ್ಶಿಯಾದ 37 ವರ್ಷ ವಯಸ್ಸಿನ ಎ.ಪಿ.ಶ್ರೀನಿವಾಸನ್, ಮುಖ್ಯಮಂತ್ರಿ ಜಯಲಲಿತಾ ಅವರ ದೇವಾಲಯ "ಅಮ್ಮಾ ದೇವಾಲಯ" ನಿರ್ಮಿಸಲು ಮುಂದಾಗಿದ್ದಾರೆ.  
 
ವೆಲ್ಲೂರ್‌ನಿಂದ 60 ಕಿ.ಮೀ ದೂರದಲ್ಲಿರುವ ಐಯಪ್ಪೆಡು ಗ್ರಾಮದಲ್ಲಿ ಶ್ರೀನಿವಾಸನ್ ಮಾಲೀಕತ್ವದ 1200 ಚದುರ ಅಡಿಯಲ್ಲಿ ದೇವಾಲಯ ನಿರ್ಮಾಣವಾಗಲಿದ್ದು, 50 ಲಕ್ಷ ರೂಪಾಯಿಗಳು ವೆಚ್ಚವಾಗಲಿವೆ. ನಿನ್ನೆ ಭೂಮಿ ಪೂಜೆ ನೆರವೇರಿಸಲಾಗಿದೆ. 
 
ಅಮ್ಮಾ ಆಲಯಂ ದೇವಾಲಯದಲ್ಲಿ ಜಯಲಲಿತಾರ ಆರು ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದ್ದು, ದೇವಾಲಯದ ಎಲ್ಲಾ ಬದಿಗಳಲ್ಲಿ ಅವರ ಜೀವನ ಮತ್ತು ಸಾಧನೆಗಳನ್ನು ಬರೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಅಮ್ಮಾ ದೇವಾಲಯದ ಹೊರ ಆವರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾ ದೊರೈ ಮತ್ತು ಎಂ.ಜಿ.ರಾಮಚಂದ್ರನ್ ಅವರ ಪ್ರತಿಮೆಗಳಿರಲಿವೆ.  
 
ನಾನು ಅಮ್ಮಾ ಅವರ ಭಕ್ತನಾಗಿದ್ದರಿಂದ ನನ್ನ ಭಕ್ತಿಯನ್ನು ತೋರಿಸಲು ದೇವಾಲಯ ನಿರ್ಮಿಸುತ್ತಿದ್ದೇನೆ. ಜಯಲಲಿತಾ ನಮಗೆ ದೇವರಿದ್ದಂತೆ. ಮೊದಲು ಹೂಡಿಕೆಗಾಗಿ ನಾನು ಭೂಮಿಯನ್ನು ಖರೀದಿಸಿದ್ದೆ. ಆದರೆ, ಹಲವು ವರ್ಷಗಳಿಂದ ಅಮ್ಮಾ ಅವರಿಗಾಗಿ ಏನಾದರೂ ವಿಶೇಷವಾದುದ್ದನ್ನು ಮಾಡಬೇಕು ಎನ್ನುವ ತುಡಿತವಿತ್ತು. ಇದೀಗ ಅವರ ದೇವಾಲಯ ನಿರ್ಮಾಣ ಮಾಡುವ ಆಲೋಚನೆ ಬಂದಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.
 
ಅಮ್ಮಾ ದೇವಾಲಯ ನಿರ್ಮಾಣಕ್ಕೆ ಅಗತ್ಯವಾದ ಹಣವನ್ನು ತಮ್ಮ ಕುಟುಂಬದ ಸದಸ್ಯರಿಂದ ಮತ್ತು ಅಮ್ಮಾ ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುವುದು ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ