ವಿದ್ಯಾರ್ಥಿನಿಯರು ಧ್ವಜಗಳನ್ನು ಹಿಡಿಯುವುದು ಮುಸ್ಲಿಂ ಸಂಸ್ಕೃತಿಗೆ ವಿರುದ್ಧ!

ಬುಧವಾರ, 29 ಅಕ್ಟೋಬರ್ 2014 (16:58 IST)
ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಚುನಾವಣಾ ಅಭಿಯಾನದ ಸಂದರ್ಭದಲ್ಲಿ, ವಿದ್ಯಾರ್ಥಿನಿಯರು ಧ್ವಜಗಳನ್ನು ಬೀಸುವುದಕ್ಕೆ, ಪುರುಷ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ಎಂದು ವರದಿಯಾಗಿದೆ. 

ಅವರಿಗೆ ತಿರುಮಂತ್ರ ಪ್ರಯೋಗಿಸಿರುವ ಹುಡುಗಿಯರು, ಹುಡುಗರು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು  ಗೌರವಿಸಲಿ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಟಾಂಗ್ ನೀಡಿದ್ದಾರೆ. 
 
ಹುಡುಗಿಯರು ಧ್ವಜಗಳನ್ನು ಬೀಸುವುದು ಪಾಪಕೃತ್ಯವಲ್ಲ. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರು ಕೂಡ ಪ್ರಶ್ನಿಸುವಂತಿಲ್ಲ. ಮೊದಲು ನನ್ನನ್ನು ಸಹೋದರಿ ಎಂದು ಕರೆಯುವ  ಕಪಟವೇಷದಾರಿಗಳು ತದನಂತರ  ನನ್ನ ಸ್ವಾತಂತ್ರ್ಯಕ್ಕೆ ಸವಾಲೆಸೆಯುತ್ತಾರೆ. ಅಂತವರು ನಾನು ಮೂರ್ಖಳಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಲಿ " ಎಂದು ವಿದ್ಯಾರ್ಥಿನಿಯೊಬ್ಬಳು ಖಡಕ್ ಪ್ರತ್ಯುತ್ತರ ನೀಡಿದ್ದಾಳೆ. 
 
ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಯರು ಕಾಲೇಜು ಕ್ಯಾಂಪಸ್‌ನಲ್ಲಿ ಪ್ಲೇಕಾರ್ಡ್ಸ್ ಹಿಡಿದಿದ್ದಕ್ಕೆ ಕೆಲವು ಪುರುಷ ವಿದ್ಯಾರ್ಥಿಗಳು ವಿರೋಧ ವ್ಯಕ್ತ ಪಡಿಸಿದ್ದರು. ಇದು ಮುಸ್ಲಿಂ ಸಂಸ್ಕೃತಿಗೆ ವಿರುದ್ಧ ಎಂಬುದು ಅವರ ವಾದ. 
 
ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ವಿದ್ಯಾರ್ಥಿ ಲೇಯಾಖತ್ ಖಾನ್, ಒಂದು ಕಡೆ,  ವೇದಿಕೆಯ ಮೇಲೆ ನಿಂತುಕೊಂಡು ಮಹಿಳೆಯರ ರಕ್ಷಣೆ ಮತ್ತು ಅವರ ಘನತೆಯನ್ನು ಕಾಪಾಡುವ ಮಾತನಾಡುವ ವಿದ್ಯಾರ್ಥಿಗಳು,  ನಂತರ ಮಹಿಳೆಯರು ಧ್ವಜಗಳನ್ನು ಕೈಯಲ್ಲಿ ಹಿಡಿದುದನ್ನು ವಿರೋಧಿಸುತ್ತಾರೆ ಎಂದು ತಮ್ಮ ಸಹಪಾಠಿಗಳ ಕುರಿತು ವ್ಯಂಗ್ಯವಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ