ಪದೇ ಪದೇ ಜೀವ ಬೆದರಿಕೆ: ಅಣ್ಣಾ ಹಜಾರೆಗೆ ಝಡ್ + ಭದ್ರತೆ

ಶುಕ್ರವಾರ, 21 ಆಗಸ್ಟ್ 2015 (12:55 IST)
ಹಿರಿಯ ಸಾಮಾಜಿಕ ಹೋರಾಟಗಾರ, ಗಾಂಧೀವಾದಿ ಅಣ್ಣಾ ಹಜಾರೆ ಅವರಿಗೆ ಮಹಾರಾಷ್ಟ್ರ ಸರ್ಕಾರ ಝಡ್‌+ ಭದ್ರತೆಯನ್ನು ಒದಗಿಸಿದೆ. ಅವರಿಗೆ ಪದೇ ಪದೇ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಝಡ್+ ಭದ್ರತೆ ನೀಡುವಂತೆ ಆದೇಶಿಸಿದ್ದಾರೆ.
ಇತ್ತೀಚೆಗೆ ಅಣ್ಣಾ ಅವರಿಗೆ ಜೀವ ಬೆದರಿಕೆ ಕರೆ ಹೆಚ್ಚಿವೆ. ಕಳೆದ 10 ದಿನಗಳಲ್ಲಿ 2 ಬಾರಿ ಅವರಿಗೆ ಜೀವ ಬೆದರಿಕೆ ಪತ್ರಗಳು ಬಂದಿವೆ. 
 
ಕೇಜ್ರಿವಾಲ್‌ ಸಹವಾಸ ಬಿಡದಿದ್ದಲ್ಲಿ ಪುಣೆಯ ವಿಚಾರವಾದಿ ನರೇಂದ್ರ ದಬ್ಹೋಲ್‌ಕರ್‌ ಅವರನ್ನು ಗುಂಡಿಟ್ಟು ಕೊಂದ ಮಾದರಿಯಲ್ಲಿ ನಿಮ್ಮನ್ನು ಕೊಲ್ಲಲಾಗುವುದು. ಹುಟ್ಟೂರು ರಾಲೇಗಾಂವ್ ಸಿದ್ಧಿಯನ್ನು ಬಿಟ್ಟು ಕದಲಿದರೆ ಜೋಕೆ ಎಂದು ಕೆಲ ದಿನಗಳ ಹಿಂದೆ ಅವರಿಗೆ ಬೆದರಿಕೆ ಹಾಕಲಾಗಿತ್ತು. 
 
ಅದರ ಬೆನ್ನಲ್ಲೇ ಈಗ ಮತ್ತೆ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ತಾನು ಮಹಾದೇವ್ ಪಾಂಚಾಲ, ಪುಣೈ ನಿವಾಸಿ ಎಂದು ಹೇಳಿಕೊಂಡಿರುವ ವ್ಯಕ್ತಿ ಅಣ್ಣಾಗೆ ತಾನು ಶಾರ್ಪ್ ಶೂಟರ್ ಆಗಿದ್ದು, ನಿಮ್ಮನ್ನು ಕೊಲ್ಲಲು ಹಣ ಪಡೆದಿದ್ದೇನೆ ಎಂದು ಪತ್ರದಲ್ಲಿ ಹೇಳಿದ್ದಾನೆ. 
 
ತಾನು ನಿಮಗೆ ಬರೆಯುತ್ತಿರುವ ಎರಡನೇ ಬೆದರಿಕೆ ಪತ್ರವಿದು ಎಂದು ಆತ ಹೇಳಿಕೊಂಡಿದ್ದು, "ನಿಮ್ಮನ್ನು ಸಾಯಿಸಲು ತಾನು ಹಣವನ್ನು ಪಡೆದಿದ್ದೇನೆ. ನೀವು ದೇವರ ಸಂದೇಹವಾಹಕರಾಗಿದ್ದರೆ, ನಾನು ಪಿಶಾಚಿ. ಕ್ರೂರ ಪ್ರಾಣಿಗಿಂತ ನಾನು ಬಹಳ ಅಪಾಯಕಾರಿ. ಯಾಕೆಂದರೆ ನಾನು ಬುದ್ಧಿವಂತ. ಬದುಕಿನಲ್ಲಿ ಒಮ್ಮೆಯೂ ಒಳ್ಳೆಯ ಕೆಲಸವನ್ನು ಮಾಡಿಲ್ಲ ನಾನು. ನೀವು ಸಮಾಜಸೇವೆಯಲ್ಲಿ ತೊಡಗಿರುವುದು ನನಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ನಿಮ್ಮನ್ನು ಕೊಲ್ಲುತ್ತೇನೆ.  ಪೊಲೀಸರು ಏನೇ ಮಾಡಿದರೂ ಕೂಡ ನನ್ನನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಉತ್ತಮ ಜನರನ್ನು ಕೊಲ್ಲುವುದೇ ನನ್ನ ಜೀವನದ ಉದ್ದೇಶ. ನಾನು ಲೆಕ್ಕವಿಲ್ಲದಷ್ಟು ಕೆಟ್ಟ ಕೆಲಸಗಳನ್ನು ಮಾಡಿದ್ದೇನೆ. ಆದರೆ ಪೊಲೀಸರು ನನ್ನನ್ನು ಬಂಧಿಸಲು ಶಕ್ತರಾಗಿಲ್ಲ", ಎಂದು ಹೇಳಿದ್ದಾನಾತ. 
 
ಈ ಕುರಿತು ಅಹಮದ್ ನಗರದ ಪಾರ್ನರ್ ಪೊಲೀಸ್ ಠಾಣೆಯಲ್ಲಿ ಅಣ್ಣಾ ಸಹಚರರಾದ ದತ್ತಾ ಆವಾರಿ ದೂರು ಸಲ್ಲಿಸಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಅಣ್ಣಾ, ತಾನು ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನನ್ನ ಕೆಲಸಗಳನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ