ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಕಿಡಿಕಾರಿದ ಅಣ್ಣಾ ಹಜಾರೆ

ಗುರುವಾರ, 30 ಜೂನ್ 2016 (16:34 IST)
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದು ಸ್ಮಾರ್ಟ್ ಸಿಟಿ ಯೋಜನೆ ಗಾಂಧೀಜಿಯವರ ಗ್ರಾಮ-ಕೇಂದ್ರಿತ ಅಭಿವೃದ್ಧಿಗೆ ವಿರೋಧವಾಗಿದ್ದು ಇದು ಪರಿಸರ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಗುಡುಗಿದ್ದಾರೆ. 
 
ತಮ್ಮ ತವರು ರಾಲೇಗಾನ್ ಸಿದ್ಧಿಯಲ್ಲಿ ಪತ್ರಕರ್ತರೊಂದಿಗೆ ಮಾತನ್ನಾಡುತ್ತಿದ್ದ ಅವರು ಪುಣೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಪ್ರಾರಂಭಿಸಿ ಮಾತನ್ನಾಡುತ್ತಿದ್ದ ಮೋದಿ ನಗರೀಕರಣ ಸಮಸ್ಯೆಯಾಗಬಾರದು ಬದಲಾಗಿ ಅವಕಾಶವಾಗಿ ಕಾಣಬೇಕು ಎಂದು ಹೇಳಿದ ಬಳಿಕ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಅಧಿಕಾರಕ್ಕೇರಿ 2 ವರ್ಷಗಳಾದರೂ ಸಹ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಲೋಕಪಾಲ್ ಮತ್ತು ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸಿಲ್ಲ ಎಂದು ಸಹ ಅವರು ಪತ್ರಮುಖೇನ ಕಿಡಿಕಾರಿದ್ದಾರೆ. 
 
ಗಾಂಧಿ ಅವರಂತೆ ಮೋದಿ ಸಹ ಗುಜರಾತ್‌ನಲ್ಲಿ ಜನಿಸಿದವರು. ಮೋದಿ ಹೇಳುತ್ತಿರುವುದು ಸತ್ಯವೋ ಅಥವಾ ಮಹಾತ್ಮಾ ಗಾಂಧಿಯವರು ಹೇಳಿದ್ದೋ ಎಂಬುದು ನನ್ನ ಪ್ರಶ್ನೆಯಾಗಿದೆ ಎಂದು ಅವರು ಗೊಂದಲವನ್ನು ವ್ಯಕ್ತ ಪಡಿಸಿದ್ದಾರೆ. 
 
ಗಾಂಧೀಜಿಯವರ ಪ್ರಕಾರ ಪರಿಸರದ ಮೇಲೆ ದೌರ್ಜನ್ಯವೆಸಗಿ ಮಾಡಿದ ಅಭಿವೃದ್ಧಿ ಸಮರ್ಥನೀಯ ಅಲ್ಲ. ನಗರೀಕರಣ ಹೆಚ್ಚೆಚ್ಚು ಇಂಗಾಲದ ಡೈ ಆಕ್ಸೈಡ್‌ನ್ನು ಸೃಷ್ಟಿಸುತ್ತದೆ. ಇದು ಪರಿಸರಕ್ಕೆ ಮತ್ತು ಮಾನವನ ಉಳಿವಿಗೆ ಮಾರಕವಾಗಿದ ಎಂದು ಅವರು ಕಿಡಿಕಾರಿದ್ದಾರೆ. 
 
ಕೃಷಿ ಕೇಂದ್ರಿತ ರಾಷ್ಟ್ರವಾದ ಭಾರತದಲ್ಲಿ ವ್ಯವಸಾಯಕ್ಕೆ ಬಳಸಬೇಕಾದ ನೀರನ್ನು ನಗರಕ್ಕೆ ಹರಿಸಲಾಗುತ್ತಿದೆ. ಇದು ಬಹುದೊಡ್ಡ ದುರಂತ ಎಂದು ಅವರು ಕ್ರೋಧ ವ್ಯಕ್ತ ಪಡಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ