ಮಹಾರಾಷ್ಟ್ರ ರಾಜ್ಯವನ್ನು ಮದ್ಯಮುಕ್ತ ರಾಜ್ಯವಾಗಿ ಘೋಷಿಸಿ: ಅಣ್ಣಾ ಹಜಾರೆ

ಸೋಮವಾರ, 29 ಜೂನ್ 2015 (15:46 IST)
ರಾಜ್ಯದಾದ್ಯಂತ ಪ್ರತಿಯೊಂದು ಜಿಲ್ಲೆಗಳಲ್ಲಿ ಮದ್ಯವನ್ನು ನಿಷೇಧಿಸಿ ರಾಜ್ಯವನ್ನು ಮದ್ಯಮುಕ್ತ ರಾಜ್ಯ ಎಂದು ಘೋಷಿಸಬೇಕು ಎಂದು ಹಿರಿಯ ಗಾಂಧಿವಾದಿ ಸಮಾಜ ಸುಧಾರಕ ಅಣ್ಣಾ ಹಜಾರೆ ಒತ್ತಾಯಿಸಿದ್ದಾರೆ.
 
ಅಹ್ಮದ್‌ನಗರ್‌ದಲ್ಲಿ ಮದ್ಯ ವಿರೋಧಿ ಚಳುವಳಿಗೆ ಚಾಲನೆ ನೀಡಿದ ಹಜಾರೆ, ಚಳುವಳಿಗೆ ಬೆಂಬಲ ಪಡೆಯಲು 5 ಲಕ್ಷ ನಾಗರಿಕರ ಸಹಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
 
ಮದ್ಯಸೇವನೆಗೆ ತುತ್ತಾಗಿ ಅನೇಕ ಕುಟುಂಬಗಳು ಸರ್ವನಾಶವಾಗಿ ಹೋಗಿವೆ. ದೇಶದ ಯುವ ಸಮೂಹ ಮದ್ಯಸೇವನೆಯನ್ನು ಫ್ಯಾಶನ್ ಎನ್ನುವಂತೆ ವರ್ತಿಸುತ್ತಿದೆ. ಅಹ್ಮದ್‌ನಗರ್ ಧಾರ್ಮಿಕ ಗುರುಗಳ ಮತ್ತು ಸಂತರ ತವರೂರಾಗಿದೆ. ಸಾಧು ಸಂತರ ಗೌರವಕ್ಕಾಗಿಯಾದರೂ ಮದ್ಯ ಸೇವನೆಗೆ ಸರಕಾರ ನಿಷೇಧ ಹೇರಬೇಕು ಎಂದರು. 
 
ಮದ್ಯ ನಿಷೇಧ ಚಳುವಳಿಯ ಸಹಿ ಸಂಗ್ರಹಕ್ಕೆ ಮೊದಲನೆಯವರಾಗಿ ಸಹಿ ಹಾಕಿದ ಹಜಾರೆ, ಫಡ್ನವೀಸ್ ಸರಕಾರ ಶೀಘ್ರದಲ್ಲಿ ರಾಜ್ಯವನ್ನು ಮದ್ಯಮುಕ್ತ ರಾಜ್ಯವನ್ನಾಗಿ ಘೋಷಿಸುವ ವಿಶ್ವಾಸವಿದೆ. ಮದ್ಯವ್ಯಸನಿ ಕುಟುಂಬದ ಸದಸ್ಯರಿಂದ ಮಹಿಳೆಯರು ತುಂಬಾ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ