ಅನುಪಮ್ ಖೇರ್, ಶಶಿ ತರೂರ್ ಟ್ವಿಟರ್ ಕಾಳಗ

ಸೋಮವಾರ, 1 ಫೆಬ್ರವರಿ 2016 (09:29 IST)
ಪ್ರಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ಕಾಂಗ್ರೆಸ್ ಧುರೀಣ ಶಶಿ ತರೂರ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿ ನಡೆದಿದೆ. ನಾನು ಹಿಂದೂವೆಂದು ಬಹಿರಂಗವಾಗಿ  ಹೇಳಿಕೊಳ್ಳಲು ಭಯವಾಗುತ್ತಿದೆ ಎಂದು ಇತ್ತೀಚಿಗೆ ಖೇರ್ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪ್ರತಿಕ್ರಿಯಿಸಿದುದು ಈ ಟ್ವಿಟರ್‌ ಕಿತ್ತಾಟಕ್ಕೆ ಕಾರಣವಾಗಿದೆ. 

ಮಾಜಿ ಸಚಿವ, ತಿರುವನಂತಪುರಮ್ ಸಂಸದ ತರೂರ್, ಅನುಪಮ್‌ ಖೇರ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ 'ಅನುಪಮ್ ಅವರೇ, ನಾನೊಬ್ಬ ಹಿಂದೂ ಎಂದು ಸದಾ ಅಭಿಮಾನದಿಂದ ಹೇಳಿಕೊಳ್ಳುತ್ತೇನೆ. ಆದರೆ ಸಂಘ ಪರಿವಾರದ ರೀತಿಯ ಹಿಂದೂ ಅಲ್ಲ’ ಎಂದು ಟ್ವೀಟ್‌ ಮಾಡುವುದರ ಮೂಲಕ ಕಿತ್ತಾಟಕ್ಕೆ ನಾಂದಿ ಹಾಡಿದ್ದಾರೆ.
 
ಅದಕ್ಕೆ ತತ್‌ಕ್ಷಣಕ್ಕೆ ಪ್ರತಿಕ್ರಿಯಿಸಿದ ಖೇರ್ ಶಶಿ ಅವರೇ, ಇತರರ ರೀತಿಯಲ್ಲಿ ನೀವು ಕೂಡ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿರಾ ಎಂದುಕೊಂಡಿರಲಿಲ್ಲ. ಕಾಂಗ್ರೆಸ್‌ನ ಚಮಚಾದಂತೆ ವರ್ತಿಸುತ್ತಿದ್ದಿರಾ ಎಂದು ಚಾಟಿ ಬೀಸಿದ್ದಾರೆ. 
 
ಇದಕ್ಕೆ ಪ್ರತಿಕ್ರಿಯೆಯಾಗಿ ತರೂರ್‌, ‘ ನಿಮ್ಮ ವಾದಕ್ಕೆ ಸಮರ್ಥಿಸಿಕೊಳ್ಳಲಾಗದಿದ್ದಾಗ ನಿಂದನೆಗಿಳಿಯುವುದು ನಿಮ್ಮ ಹಳೆಯ ಅಭ್ಯಾಸ. ನಾನು ಕಾಂಗ್ರೆಸ್ ಪಕ್ಷದ ಹೆಮ್ಮೆಯ ಸಂಸದ. ಅವಮಾನಿಸಿದ್ದಕ್ಕೆ ಪ್ರತಿಯಾಗಿ ಅವಮಾನಿಸಲು ನಾನು ಎಂದಿಗೂ ಮುಂದಾಗುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.
 
 
ಕೊನೆಯ ಪ್ರತಿಕ್ರಿಯೆ ಖೇರ್ ಅವರಿಂದ ಬಂದಿದ್ದು  ‘ನಿಮ್ಮ ರೀತಿಯ ಹಿಂದೂ ಮತ್ತು ಸಂಘದ ರೀತಿಯ ಹಿಂದೂ ಎಂಬ ವರ್ಗೀಕರಣವನ್ನು ಮಾಡಿದವರು ನೀವೇ ಎಂಬುದನ್ನು ಮರೆತು ಬಿಟ್ಟಿರಿ ’ ಎಂದು ಮರು ಟ್ವೀಟ್ ಮಾಡಿದ್ದಾರೆ.
 
ಇತ್ತೀಚಿಗೆ ಪದ್ಮಭೂಷಣ ಪ್ರಶಸ್ತಿಯಿಂದ ಪುರಷ್ಕೃತರಾದ ಹಿರಿಯ ನಟ ಖೇರ್ ಅಸಹಿಷ್ಣುತೆ ವಿವಾದವನ್ನು ವಿರೋಧಿಸುತ್ತಲೇ ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ