ಗುಜರಾತ್ ಹಿಂಸಾಚಾರ: 9 ಬಲಿ; ಶಾಂತಿಗಾಗಿ ಮೋದಿ ಮನವಿ

ಗುರುವಾರ, 27 ಆಗಸ್ಟ್ 2015 (08:53 IST)
ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಗುಜರಾತ್‌ನ ಪಟೇಲ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನಾ ಹೋರಾಟ ಮೊನ್ನೆ ರಾತ್ರಿಯಿಂದ ಹಿಂಸಾಚಾರಕ್ಕೆ ತಿರುಗಿದ್ದು, ಪರಿಣಾಮ ನಿನ್ನೆಯವರೆಗೆ ಒಟ್ಟು 9 ಜನರು ಮೃತ ಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಐವರು ಪೊಲೀಸ್ ಗೋಲಿಬಾರ್‌ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಧ್ವಂಸಕ ಕೃತ್ಯ ನಡೆಸುತ್ತಿದ್ದವರನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್‌‌‌‌‌ ನಡೆಸಿದ ಪರಿಣಾಮ 5 ಜನ ಸಾವನ್ನಪ್ಪಿದ್ದಾರೆ.
 
ಗಿರೀಶ್ ಪಟೇಲ್ (47) ಮತ್ತು ಅವರ ಪುತ್ರ ಸಿದ್ಧಾರ್ಥ ಪಟೇಲ್ (20) ಮಂಗಳವಾರ ರಾತ್ರಿ ಪೊಲೀಸ್ ಗೋಲಿಬಾರ್‌ನಲ್ಲಿ ಸತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟ ಉಳಿದವರ ವಿವರಗಳು ಲಭ್ಯವಾಗಿಲ್ಲ.
 
ಭದ್ರತೆಗಾಗಿ ಅಹಮದಾಬಾದ್‌ನಲ್ಲಿ  ಸೇನೆಯ 5 ತುಕಡಿಗಳನ್ನು ನೇಮಿಸಲಾಗಿದೆ. ಅರೆಸೇನಾ ಪಡೆಯ 50,000 ಸಿಬ್ಬಂದಿಗಳು ಸಹ ಸ್ಥಳದಲ್ಲಿ ತಳವೂರಿದ್ದಾರೆ. 
 
ಪ್ರತಿಭಟನೆ ನೇತೃತ್ವ ವಹಿಸಿರುವ ಹಾರ್ದಿಕ್ ಪಟೇಲ್, ಹಿಂಸೆಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ. ಅಹಿಂಸಾ ಮಾರ್ಗದಲ್ಲಿ ಧರಣಿ ನಡೆಸುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಕಿಡಿಕಾರಿದ್ದಾರೆ. ಅಹಮದಾಬಾದ್, ಸೂರತ್, ಮೆಹ್ಸಾನ, ರಾಜ್ ಕೋಟ್, ಪಠಾಣ್ ನಗರಗಳಲ್ಲಿ ಕರ್ಫ್ಯೂ ಮುಂದುವರೆದಿದೆ.ಪೊಲೀಸರು ಮಹಿಳೆಯರು ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಹಾರ್ದಿಕ್ ಪಟೇಲ್, ಪೊಲೀಸ್ ದೌರ್ಜನ್ಯ ಹೀಗೆ ಮುಂದುವರೆದರೆ ಮುಂದಿನ ಪರಿಣಾಮಗಳಿಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ಹೊಣೆ ಹೋರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
 
ಮುಂದಿನ ಸೋಮವಾರದ ತನಕ ಅಹಮಾದಾಬಾದ್‌ನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
 
ತವರು ರಾಜ್ಯದಲ್ಲಿ ಉದ್ಭವಿಸಿರುವ ಈ ಪ್ರಕ್ಷುಬ್ಧ ಪರಿಸ್ಥಿತಿ ಪ್ರಧಾನಿ ಮೋದಿಯವರನ್ನು ಚಿಂತೆಗೀಡು ಮಾಡಿದ್ದು, 'ಸರ್ದಾರ್ ಪಟೇಲ್, ಮಹಾತ್ಮಾ ಗಾಂಧಿ ನಾಡಿನಲ್ಲಿ ಹಿಂಸೆಗೆ ಅವಕಾಶ ಕೊಡಬೇಡಿ. ಶಾಂತಿ ಕಾಪಾಡಿ. ಮಾತುಕತೆ ಮೂಲಕ ಎಲ್ಲವನ್ನೂ ಪರಿಹರಿಸಿಕೊಳ್ಳೋಣ', ಎಂದು ಅವರು ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ