ತುರ್ತುಪರಿಸ್ಥಿತಿ ಹೇರಿದ ಕಾಂಗ್ರೆಸ್‌ನಿಂದ ಅಸಹಿಷ್ಣುತೆ ಚರ್ಚೆ:ಅರುಣ್ ಜೇಟ್ಲಿ ಲೇವಡಿ

ಶುಕ್ರವಾರ, 27 ನವೆಂಬರ್ 2015 (16:22 IST)
ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷ ಇದೀಗ ಸಂವಿಧಾನದ ಸಿದ್ಧಾಂತ ಮತ್ತು ಅಸಹಿಷ್ಣುತೆಯ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಲೇವಡಿ ಮಾಡಿದ್ದಾರೆ.
 
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ತುರ್ತುಪರಿಸ್ಥಿತಿಯಲ್ಲಿ ಸಂವಿಧಾನದ 21 ರ ಅಡಿಯಲ್ಲಿ ದೇಶದ ಜನತೆಯ ಬದುಕು ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಅಂದಿನ ಸರಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿತ್ತು ಎಂದು ಜೇಟ್ಲಿ ತಿರುಗೇಟು ನೀಡಿದರು.  
 
ಪ್ರಜಾಪ್ರಭುತ್ವಕ್ಕೆ ಸವಾಲಾಗಿ ತುರ್ತುಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಜನತೆಯ ಬದುಕುವ ಹಕ್ಕು ಕಸಿದುಕೊಂಡಿತ್ತು. ಇದೀಗ ಸಂವಿಧಾನ ಮತ್ತು ಅಸಹಿಷ್ಣುತೆ ಬಗ್ಗೆ ಸಂಸತ್ತಿನಲ್ಲಿ ಸವಾಲುಗಳನ್ನು ಎತ್ತುತ್ತಿರುವುದು ಹಾಸ್ಯಾಸ್ಪದ ಎಂದರು.
 
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಜೇಟ್ಲಿ ಮಾತನಾಡುತ್ತಿದ್ದರು.
 
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಉದ್ದೇಶಪೂರ್ವಕವಾಗಿ ಸಂವಿಧಾನದ ತತ್ವ , ಸಿದ್ಧಾಂತಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ