ಅರಬ್ಬಿ ಸಮುದ್ರ ಮತ್ತು ಗೋಕರ್ಣದಲ್ಲಿ ವಿಸರ್ಜಿತವಾದ ಅರುಣಾ ಶಾನಭಾಗ್ ಚಿತಾಭಸ್ಮ

ಗುರುವಾರ, 28 ಮೇ 2015 (15:25 IST)
ಮುಂಬೈನ ಕೆಇಎಮ್ ಆಸ್ಪತ್ರೆಯ ದಾದಿಯರು ತಮ್ಮ ಮಾಜಿ ಸಹೋದ್ಯೋಗಿ ಮತ್ತು ದೀರ್ಘಕಾಲದ ರೋಗಿ ಅರುಣಾ ಶಾನಭಾಗ್ ಅವರ ಚಿತಾಭಸ್ಮವನ್ನು ವಿಸರ್ಜಿಸಿದರು. ಆಸ್ಪತ್ರೆಯ ಡೀನ್ ಡಾಕ್ಟರ್ ಅವಿನಾಶ್ ಸುಪೆ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅವರ ಚಿತಾಭಸ್ಮವನ್ನು ಸಮುದ್ರದಲ್ಲಿ ಬಿಟ್ಟು ಅವರಿಗೆ ವಿದಾಯವನ್ನು ಹೇಳಿದೆವು ಎಂದು ಡಾಕ್ಟರ್ ಅವಿನಾಶ್ ಸುಪೆ ಹೇಳಿದ್ದಾರೆ. ಅರುಣಾ ಅವರ ಅಂತಿಮ ವಿಧಿ ವಿಧಾನಗಳನ್ನು ಮಾಡುವ ಸಂದರ್ಭದಲ್ಲಿ ಅವರ ಸಂಬಂಧಿಕರು ಸಹ ಉಪಸ್ಥಿತರಿದ್ದರು. ಆಕೆಯ ಚಿತಾಭಸ್ಮವನ್ನೂ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯ ಪ್ರಕಾರ, ಸಂಬಂಧಿಕರೊಬ್ಬರು ಗೋಕರ್ಣದಲ್ಲಿ ಕೂಡ ವಿಸರ್ಜಿಸಿದರು ಎಂದು ಅವರು ತಿಳಿಸಿದ್ದಾರೆ. 
 
ದಯಾಮರಣದ ಬಗ್ಗೆ ದೇಶಾದ್ಯಂತ ಚರ್ಚೆ ಆರಂಭವಾಗಲು ಕಾರಣರಾಗಿದ್ದ ಅತ್ಯಾಚಾರ ಸಂತ್ರಸ್ತೆ ನರ್ಸ್ ಅರುಣಾ ಶಾನಭಾಗ್ 42 ವರ್ಷಗಳ ಕೋಮಾದಿಂದ ಮೇ 18 ರಂದು ಚಿರನಿದ್ರೆಗೆ ಜಾರಿದ್ದರು.
 
ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಅರುಣಾ ಅವರ ಮೇಲೆ 1973ರ ನವೆಂಬರ್ 27 ರಂದು ಅತ್ಯಾಚಾರ ನಡೆದಿತ್ತು. ಈ ಕೃತ್ಯವೆಸಗಿದ್ದ ವಾರ್ಡ್‌ಬಾಯ್ ಸೋಹನ್ ಲಾಲ್ ಭಾರ್ತ ವಾಲ್ಮೀಕಿ ಆಕೆಯ ಕುತ್ತಿಗೆಗೆ ಸರಪಳಿ ಬಿಗಿದ ಪರಿಣಾ ಮೆದುಳಿಗೆ ರಕ್ತ ಪೂರೈಕೆಯಾಗದೇ ಆಕೆ ಕೋಮಾವಸ್ಥೆಗೆ ಜಾರಿದ್ದಳು. 42 ವರ್ಷಗಳ ಕಾಲ ಕೋಮಾದಲ್ಲಿದ್ದ ಅರುಣಾ ಅವರನ್ನು ಆಸ್ಪತ್ರೆಯ ಸಿಬ್ಬಂದಿಗಳು ಮುತುವರ್ಜಿಯಿಂದ ನೋಡಿಕೊಂಡಿದ್ದರು. 
 
ಅರುಣಾ ಅವರಿಗೆ ದಯಾಮರಣ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.

ವೆಬ್ದುನಿಯಾವನ್ನು ಓದಿ