ಎಂಸಿಡಿ ಉದ್ಯೋಗಿಗಳ ವೇತನಕ್ಕಾಗಿ 550 ಕೋಟಿ ಸಾಲ ನೀಡಲು ಮುಂದಾದ ದೆಹಲಿ ಸಿಎಂ ಕೇಜ್ರಿವಾಲ್

ಬುಧವಾರ, 3 ಫೆಬ್ರವರಿ 2016 (16:59 IST)
ಪ್ರತಿಭಟನಾ ನಿರತ ಉದ್ಯೋಗಿಗಳಿಗೆ ವೇತನ ನೀಡಲು ಅನುಕೂಲವಾಗಲು ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ಗೆ 550 ಕೋಟಿ ರೂಪಾಯಿಗಳ ಸಾಲವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ , ದೆಹಲಿ ಸಿಎಂ ಕೇಜ್ರಿವಾಲ್, ಎಂಸಿಡಿಗೆ ಹಣ ಬೀಡುಗಡೆಗೊಳಿಸುವ ಬಗ್ಗೆ  ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದಾರೆ
 
ಪ್ರಧಾನಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಬಿಜೆಪಿ ಅಧಿಕಾರದಲ್ಲಿರುವ ಮೂರು ಮುನ್ಸಿಪಲ್ ಕಾರ್ಪೋರೇಶನ್‌ಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಕಳೆದ 10 ವರ್ಷಗಳಿಂದ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ಗಳಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಭ್ರಷ್ಟಾಚಾರದ ಕೂಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಅರುಣಾಚಲಪ್ರದೇಶದಂತೆ ದೆಹಲಿಯಲ್ಲೂ ಅರಾಜಕತೆ ಸೃಷ್ಟಿಸಿ ರಾಷ್ಟ್ರಪತಿ ಅಡಳಿತ ಹೇರುವ ಹುನ್ನಾರವನ್ನು ಕೇಂದ್ರ ಸರಕಾರ ನಡೆಸಿದೆ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ