ಸಲ್ಮಾನ್ ಖಾನ್ ಚಾಲಕನ ಮೇಲೆ ಸುಳ್ಳು ಸಾಕ್ಷ್ಯದ ಕೇಸ್?

ಬುಧವಾರ, 6 ಮೇ 2015 (16:03 IST)
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು ಅವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಕಾರು ಚಲಾಯಿಸಿದ್ದು ನಾನು, ಸಲ್ಮಾನ್ ಅಲ್ಲವೆಂದು ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದ ಸಲ್ಲು ಕಾರ್ ಡ್ರೈವರ್ ಅಶೋಕ್ ಸಿಂಗ್ ಅವರ ಮೇಲೆ ಸುಳ್ಳು ಸಾಕ್ಷ್ಯದ ಆಪಾದನೆ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಂದು ಮುಂಜಾನೆ ಸಹ ಸಿಂಗ್ ಸಲ್ಮಾನ್ ಕಾರ್ ಚಲಾಯಿಸಿಕೊಂಡು ಕೋರ್ಟ್‌ಗೆ ಬಂದಿದ್ದರು. ಆತನ ವಿರುದ್ಧ ಸರಕಾರದ ಪರ ವಕೀಲರು ಸುಳ್ಳು ಹೇಳಿಕೆ ನೀಡಿದ ಆರೋಪ ಹೊರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 
 
ಸಪ್ಟೆಂಬರ್ 28, 2002ರಲ್ಲಿ  ಅಪಘಾತ ನಡೆದಾಗ ನಟನ ಟೊಯಾಟಾ ಲ್ಯಾಂಡ್ ಕ್ರೂಷರ್ ಕಾರ್‌ನ್ನು ತಾವು ಚಲಾಯಿಸುತ್ತಿದ್ದುದಾಗಿ ಚಾಲಕ ಅಶೋಕ್ ಸಿಂಗ್ ಕಳೆದ ತಿಂಗಳು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. 
 
ಪ್ರಕರಣದ ವಿಚಾರಣೆ ಪ್ರಾರಂಭವಾದ 12 ವರ್ಷಗಳ ನಂತರ ಪ್ರಥಮ ಬಾರಿ ಕೋರ್ಟ್‌ಗೆ ಹಾಜರಾದ ಸಿಂಗ್, "ನಾನು ಕಾರ್ ಚಲಾಯಿಸುತ್ತಿದ್ದಾಗ ಟೈಯರ್ ಬ್ಲಾಸ್ಟ್ ಆಗಿ ಬ್ರೇಕ್ ಜಾಮ್ ಆಯಿತು. ಹೀಗಾಗಿ ಕಾರ್ ಫುಟ್‌ಪಾತ್ ಮೇಲೆ ಸಾಗಿತು. ಅಲ್ಲಿ ಮಲಗಿದ್ದ ಕೆಲವರ ಮೇಲೆ ಕಾರ್ ಹರಿದುದನ್ನು ನಾನು ನೋಡಿದೆ. ಕಾರ್ ನಿಲ್ಲಿಸಿದ ನಾನು ಕೆಳಕ್ಕಿಳಿದೆ. ಎಡಗಡೆಯ ಡೋರ್ ಜಾಮ್ ಆಗಿದ್ದರಿಂದ ಸಲ್ಮಾನ್ ಸಹ ಬಲಗಡೆಯ ಡೋರ್ ಮೂಲಕ್ ಕೆಳಕ್ಕಿಳಿದರು. ನಾನು ಈ ಕುರಿತು ಎಷ್ಟು ಬಾರಿ ಹೇಳಿದರೂ ಪೊಲೀಸರು ಅದನ್ನು ಕೇಳಲು ತಯಾರಿರಲಿಲ್ಲ", ಎಂದು ಹೇಳಿದ್ದರು.  
 
ಸಲ್ಮಾನ್ ಅವರಿಂದ ಹಣ ಪಡೆದು ಅವರ ಚಾಲಕ ಅಶೋಕ್ ಸಿಂಗ್ ಸುಳ್ಳು ಆರೋಪವನ್ನು ತಮ್ಮ ಮೇಲೆ ಹೇರಿಕೊಳ್ಳುತ್ತಿದ್ದಾರೆ ಎಂದು ಸರಕಾರದ ಪರ ವಕೀಲರು ವಾದಿಸಿದ್ದರು. 
 
"ಅಪಘಾತಕ್ಕೆ ತಾನೇ ಜವಾಬ್ದಾರ, ಆದರೆ ತಪ್ಪು ಮಾಡದ ಸಲ್ಮಾನ್ ಇಷ್ಟೆಲ್ಲಾ ಸಮಸ್ಯೆಗೊಳಗಾಗಿರುವುದು ತನಗೆ ಬೇಸರವನ್ನುಂಟು ಮಾಡಿದೆ", ಎಂದು ಸಿಂಗ್ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದ. ಹಣ ನೀಡಿ ಸುಳ್ಳು ಸಾಕ್ಷ್ಯ ಹೇಳುತ್ತಿದ್ದಾನೆ ಎಂಬ ಆರೋಪವನ್ನು ಸಹ ಆತ ಅಲ್ಲಗಳೆದಿದ್ದ.

ವೆಬ್ದುನಿಯಾವನ್ನು ಓದಿ