ಬಾಲ್ಯವಿವಾಹ ಆಚರಣೆಯಲ್ಲಿ ಭಾರತಕ್ಕೆ ವಿಶ್ವದಲ್ಲಿ ಮೂರನೇ ಸ್ಥಾನ

ಬುಧವಾರ, 13 ಆಗಸ್ಟ್ 2014 (09:59 IST)
ಭಾರತದಲ್ಲಿ ಬಾಲ್ಯವಿವಾಹದ ಪಿಡುಗು ಇನ್ನು ಕೂಡ ಉಳಿದುಕೊಂಡಿದ್ದು, ಈ ವಿಷಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಸತ್ಯವನ್ನು ಯುನಿಸೆಫ್ ವರದಿ ಬಹಿರಂಗಗೊಳಿಸಿದೆ. 

ಇತ್ತೀಚಿಗಿನ ಪ್ರಕಟವಾದ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ವರದಿಯ ಪ್ರಕಾರ ವಿಶ್ವದಲ್ಲಿ 72 ಕೋಟಿ ಬಾಲ್ಯವಿವಾಹದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ 24 ಕೋಟಿ ಮದುವೆಗಳು ಭಾರತದಲ್ಲಿ ನಡೆದಿವೆ.  
 
ಬಾಲ್ಯವಿವಾಹಕ್ಕೆ ಒಳಗಾಗುವವರಲ್ಲಿ ಹುಡುಗಿಯರ ಸಂಖ್ಯೆಯೇ ಗಣನೀಯವಾಗಿದ್ದು,  ಕೇವಲ 15.6 ಕೋಟಿ ಗಂಡು ಮಕ್ಕಳು 18 ವರ್ಷದೊಳಗೆ ವಿವಾಹವಾದ ಪ್ರಕರಣಗಳು ವರದಿಯಾಗಿವೆ. 
 
ದೇಶದ ಜನಸಂಖ್ಯೆ, ಅನಕ್ಷರತೆ, ಬಡತನ, ಮೌಢ್ಯತೆ, ಹೆಚ್ಚಿನ ಜನಸಂಖ್ಯೆ  ಗ್ರಾಮೀಣ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ವರದಿ ಹೇಳಿದೆ. ವಿಶ್ವದಲ್ಲಿ ನಡೆಯುವ 3 ಬಾಲ್ಯವಿವಾಹಗಳಲ್ಲಿ ಒಂದು ಭಾರತದಲ್ಲಿ ನಡೆಯುತ್ತದೆ ಎಂದು ವರದಿ ಹೇಳಿದೆ.
 
ಬಾಲ್ಯವಿವಾಹ ಮತ್ತು ಅದರಿಂದ ಮಹಿಳೆಯರ ಮೇಲಾಗುತ್ತಿರುವ ಋಣಾತ್ಮಕ ಪರಿಣಾಮಗಳ ಕುರಿತು ನಡೆಸಿದ ಅಧ್ಯಯನದಲ್ಲಿ , ಹೆಣ್ಣುಮಕ್ಕಳ ಆರೋಗ್ಯ, ತಾಯಿ ಮಗುವಿನ ಮರಣದ ಪ್ರಮಾಣ, ಶಿಶುಮರಣ, ಅಪೌಷ್ಟಿಕತೆಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
 
ಸಮಾಧಾನಕರ ವಿಷಯವೆಂದರೆ ತಾಯಂದಿರ ಮರಣ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು,  2006 ರಲ್ಲಿ   254 ತಾಯಂದಿರು ಮರಣವನ್ನಪ್ಪಿದ್ದರೆ, 2009ರಲ್ಲಿ ಆ ಸಂಖ್ಯೆ 212. ಮುಂದಿನ ವರ್ಷ ಆ ಸಂಖ್ಯೆಯನ್ನು 109ಕ್ಕೆ ಇಳಿಸುವ ಗುರಿಯನ್ನು  ಸರಕಾರ ಹೊಂದಿದೆ.  

ವೆಬ್ದುನಿಯಾವನ್ನು ಓದಿ