ಹತ್ಯೆಯ ಭಯವಿಲ್ಲ, ಮುಖ್ಯಮಂತ್ರಿ ಸಮೇತ ಎಲ್ಲರ ಮುಖವಾಡವನ್ನು ಕಳಚುತ್ತೇನೆ: ಸಾಮಾಜಿಕ ಕಾರ್ಯಕರ್ತ

ಸೋಮವಾರ, 6 ಜುಲೈ 2015 (16:09 IST)
ಮಧ್ಯಪ್ರದೇಶದಲ್ಲಿ ಸಂಚಲನವನ್ನು ಮೂಡಿಸಿರುವ ವ್ಯಾಪಂ ಹಗರಣ ಇಲ್ಲಿಯವರೆಗೆ 47 ಜನರನ್ನು ಆಹುತಿ ತೆಗೆದುಕೊಂಡಿದೆ. ಕಳೆದ 3 ದಿನಗಳಿಂದ ದಿನಕೊಬ್ಬರಂತೆ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಅವರಲ್ಲಿ ಇಬ್ಬರು ಹಗರಣದ ಆರೋಪಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಗರಣದ ಆರೋಪಿಗಳು ಮತ್ತು ಸಾಕ್ಷಿಗಳಲ್ಲೂ ಸಹ ಸಾವಿನ ಭಯ ಕಾಡುತ್ತಿದೆ. ಆದರೆ ಸಾಮಾಜಿಕ ಕಾರ್ಯಕರ್ತ ಆಶಿಸ್ ಚತುರ್ವೇದಿ ಮಾತ್ರ, 'ಸತ್ತರೂ ಚಿಂತೆ ಇಲ್ಲ. ನಾನು ಸತ್ಯವನ್ನು ಬಯಲಿಗೆಳೆಯವುವವರೆಗೂ ಸುಮ್ಮನಿರುವುದಿಲ್ಲ', ಎಂದು ಗುಡುಗಿದ್ದಾರೆ.
 
"10 ಕ್ಕಿಂತ ಹೆಚ್ಚು ಬಾರಿ ಹತ್ಯೆಯ ಬೆದರಿಕೆ ಬಂದಿದೆ. ಇತ್ತೀಚಿಗೆ ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದು ಬೆದರಿಸಲಾಗಿದೆ. ಆದರೆ ತಾನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಫಲಿತಾಂಶ ನನ್ನ ಸಾವಾಗಿದ್ದರೂ ಚಿಂತೆ ಇಲ್ಲ. ಶಿವರಾಜ್ ಸಿಂಗ್ ಸೇರಿದಂತೆ ಹಗರಣದಲ್ಲಿ ಶಾಮೀಲಾಗಿರುವ ದೊಡ್ಡ ದೊಡ್ಡ ಮೀನುಗಳ ಅಸಲಿಯತ್ತನ್ನು ನಾನು ಹೊರ ತರದೇ ಸುಮ್ಮನಿರಲಾರೆ", ಎಂದು ಚತುರ್ವೇದಿ ಬಹಿರಂಗವಾಗಿ ಘೋಷಿಸಿದ್ದಾರೆ. 
 
ವ್ಯಾಪಂ ಹಗರಣವನ್ನು ಬಯಲಿಗೆಳೆದ ನಾಲ್ವರು ಪ್ರಮುಖ ವ್ಯಕ್ತಿಗಳಲ್ಲಿ ಚತುರ್ವೇದಿ ಸಹ ಒಬ್ಬರಾಗಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳು ಮತ್ತು ಸಾಕ್ಷಿಗಳು ಸೇರಿದಂತೆ ಇಲ್ಲಿಯವರೆಗೂ 47 ಜನರು ನಿಗೂಢವಾಗಿ ಸಾವನ್ನಪ್ಪಿದ್ದು ಅವರಲ್ಲಿ ಹೆಚ್ಚಿನವರು ನಿಗೂಢವಾಗಿ ಕೊನೆಯುಸಿರೆಳೆದಿದ್ದಾರೆ. 
 
ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದವರಿಗೆ ಭದ್ರತೆ ನೀಡುವಂತೆ ಸ್ಥಳೀಯ ಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚತುರ್ವೇದಿ, "ಮುಂದಿನ ನಿಗೂಢ ಸಾವು ನನ್ನದಾಗಬಹುದು", ಎಂದು ನಿಭರ್ಯವಾಗಿ ನುಡಿದಿದ್ದಾರೆ. ಸುದ್ದಿ ವಾಹಿನಿಯೊಂದರ ಜತೆಗಿನ ಸಂದರ್ಶನದಲ್ಲಿ ಅವರು  ಮಾತುಗಳನ್ನಾಡಿದ್ದಾರೆ. 
 
2013ರಲ್ಲಿ ಈ ಹಗರಣ ಬಯಲಿಗೆ ಬಂದಿತ್ತು. ಸರಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳಲು ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಲಂಚ ನೀಡಿದ ಹಗರಣ ಇದಾಗಿದೆ. ಕೇಳಲು ಇದು ಸರಳ  ಹಗರಣ ಎನಿಸುತ್ತದೆ. ಆದರೆ ಈ ಹಗರಣದಲ್ಲಿ ಶಾಮೀಲಾಗಿರುವ ಆರೋಪಿಗಳ ಸಂಖ್ಯೆಯೇ ಹತ್ತಿರ ಹತ್ತಿರ 3,000 . ಅಲ್ಲದೇ ಹಗರಣದ ಆರೋಪಿಗಳು, ಸಾಕ್ಷಿಗಳು, ತನಿಖೆಗೆ ಹೋದವರು ನಿಗೂಢವಾಗಿ ಒಬ್ಬರ ಹಿಂದೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿರುವುದು ಪ್ರಕರಣ  ದೇಶಾದ್ಯಂತ ಸಂಚಲನವನ್ನು ಮೂಡಿಸಲು ಕಾರಣವಾಗಿದೆ. 

ವೆಬ್ದುನಿಯಾವನ್ನು ಓದಿ