ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ, ಯಾಕೆ ಗೊತ್ತಾ ?

ಶನಿವಾರ, 17 ಡಿಸೆಂಬರ್ 2016 (12:21 IST)
ನವೆಂಬರ್ 8ರ ಮಧ್ಯರಾತ್ರಿ 500 ಮತ್ತು 1,000ರೂಪಾಯಿ ಮುಖಬೆಲೆ ನೋಟುಗಳನ್ನು ಬ್ಯಾನ್ ಮಾಡಿದ್ದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾಗಿನಿಂದ ದೇಶಾದ್ಯಂತ ಜನರು ಹಣಕ್ಕಾಗಿ ಒದ್ದಾಡುತ್ತಿದ್ದಾರೆ. 90% ರಷ್ಟು ಎಟಿಎಂಗಳು ಸದಾ ಹಣವಿಲ್ಲ ಎಂಬ ಬೋರ್ಡ್‌ನ್ನು ನೇತು ಹಾಕಿಕೊಂಡಿಯೇ ಇರುತ್ತವೆ.

ಸರ್ಕಾರ ಸ್ಥಿತಿ ಸುಧಾರಿಸಿದೆ, ಜನರಿಗೆ ಹಣ ಸಿಗುತ್ತಿದೆ ಎಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಸಾಕಷ್ಟು ಹಣವನ್ನು ರವಾನಿಸಿದ್ದೇವೆ ಎನ್ನುತ್ತಿದೆ. ಆದರೆ ಎಟಿಎಂಗಳು ಮಾತ್ರ ಖಾಲಿ ಖಾಲಿ. ಯಾಕೆ ಹೀಗೆ? ಎಂಬ ಪ್ರಶ್ನೆ, ಆಕ್ರೋಶ ನಿಮ್ಮನ್ನು ಕಾಡುತ್ತಿದೆಯೇ? ಉತ್ತರವೂ ನಿಮಗೆ ಸಿಗುತ್ತದೆ. ಒಮ್ಮೆ ಯೋಚಿಸಿ ನೋಡಿ.
 
ಚೆನ್ನೈ, ಬೆಂಗಳೂರು, ನವದೆಹಲಿ ಸೇರಿದಂತೆ ಅನಕ ಕಡೆಗಳಲ್ಲಿ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ದಾಖಲೆ ಇಲ್ಲದ ಮೂಟೆ ಮೂಟೆ ನೋಟುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೇ ಇದೆ ಎಟಿಎಂಗಳಲ್ಲಿ ಹಣವಿಲ್ಲದಿರುವ ಗುಟ್ಟು. 
 
ಆರ್‌ಬಿಐನಿಂದ ಸಾಕಷ್ಟು ಹಣ ಬಂದರೂ ಬ್ಯಾಂಕ್‌ಗಳು ಅದರಲ್ಲಿ 90% ರಷ್ಟು ಹಣವನ್ನು ತಮ್ಮ ಬಳಿಯೇ ಸಂಗ್ರಹಿಸಿಕೊಂಡು ಕಮಿಷನ್ ಪಡೆದು ಶ್ರೀಮಂತ ಗ್ರಾಹಕರಿಗೆ ನೀಡುತ್ತಿವೆ. 
 
ನವೆಂಬರ್ 10 ರಿಂದ ಡಿಸೆಂಬರ್ 10ರ ಅವಧಿಯಲ್ಲಿ 4.6 ಲಕ್ಷ ರೂಪಾಯಿಯನ್ನು ದೇಶದ ಅರ್ಥವ್ಯವಸ್ಥೆಗೆ ತರಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ 15,000 ಕೋಟಿ ರೂಪಾಯಿ ಹಣ ಅರ್ಥವ್ಯವಸ್ಥೆಯೊಳಕ್ಕೆ ಬರುತ್ತಿತ್ತು. ಆದರೆ ಈಗ ಪ್ರತಿದಿನ 20,000 ಬಂದರೂ ಎಟಿಎಂಗಳ ಮುಂದೆ ನೋ ಕ್ಯಾಶ್ ಬೋರ್ಡ್.
 
ಮೊದಲು ಪ್ರತಿ ಎಟಿಎಂಗಳಿಗೆ 50 ಲಕ್ಷ ರೂಪಾಯಿ ತುಂಬುತ್ತಿದ್ದ ಬ್ಯಾಂಕ್‌ಗಳು ಈಗ ಕೇವಲ 5 ಲಕ್ಷ ರೂಪಾಯಿಯನ್ನು ಸಹ ತುಂಬುತ್ತಿಲ್ಲ ಎಂದು ಎಟಿಎಂಗಳಿಗೆ ಹಣ ಸರಬರಾಜು ಮಾಡುವ ಕಂಪನಿಯ ಅಧಿಕಾರಿಯೋರ್ವರು ಹೇಳುತ್ತಾರೆ. 
 
ಜತೆಗೆ ಆರ್‌ಬಿಐ ಎಲ್ಲಾ ಎಟಿಎಂಗಳಲ್ಲಿ ಸೇವಾ ತೆರಿಗೆಯನ್ನು ಸದ್ಯಕ್ಕೆ ತಡೆಹಿಡಿದಿದ್ದರಿಂದ ಗ್ರಾಹಕರು ಯಾವುದೇ ಬ್ಯಾಂಕ್ ಎಟಿಎಂನಿಂದ ಹಣ ಪಡೆಯಬಹುದು. ಹೀಗಾಗಿ ತಮ್ಮ ಗ್ರಾಹಕರಲ್ಲದವರಿಗೂ ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಎಟಿಎಂಗೆ ಹಣ ತುಂಬುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಯೋರ್ವರು ಮಾಧ್ಯಮವೊಂದರ ಬಳಿ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ