ರೈಲಿನ ಮುಂದೆ ಸೆಲ್ಫಿ ತೆಗೆಯಲು ಹೋಗಿ ಪ್ರಾಣ ತೆತ್ತ ಮೂವರು ವಿದ್ಯಾರ್ಥಿಗಳು!

ಮಂಗಳವಾರ, 27 ಜನವರಿ 2015 (16:51 IST)
ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಪ್ರಯತ್ನಕ್ಕೆ ಇಳಿದ ಮೂವರು ಯುವಕರು ವೇಗವಾಗಿ ಬಂದ ರೈಲಿನಡಿ ಸಿಕ್ಕಿ ಸಾವನ್ನಪ್ಪಿದ ಘಟನೆ  ಉತ್ತರಪ್ರದೇಶದ ಫರಿದಾಬಾದ್‌ನಲ್ಲಿ ನಡೆದಿದೆ. 
ಸಾಹಸ ತೋರುವ ಭರದಲ್ಲಿ ಅವಿವೇಕತನ ಪ್ರದರ್ಶಿಸಿದ ವಿದ್ಯಾರ್ಥಿಗಳು ತಮ್ಮ ತಪ್ಪಿಗೆ ಪ್ರಾಣ ತ್ಯಜಿಸಬೇಕಾಯಿತು. ರೈಲು ಬರುತ್ತಿರುವಾಗ ಹಳಿಯ ಮೇಲೆ ನಿಂತು  ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡೋಣ ಎಂದು ಮಾತಾಡಿಕೊಂಡ ನಾಲ್ಕು ಜನ ಯುವಕರಲ್ಲಿ ಮೂರು ಜನ ರೈಲು ಹತ್ತಿರ ಬಂದಾಗ ಪೂರ್ವಯೋಜನೆಯಂತೆ ಹಳಿ ಪಕ್ಕಕ್ಕೆ ಹಾರಲು ವಿಫಲರಾದರು, ವೇಗವಾಗಿ ಬಂದ ರೈಲು ಮೂವರ ಮೇಲೆ ಹರಿದು ಹೋಯಿತು. ಅವರಲ್ಲೊಬ್ಬ ಮಾತ್ರ  ಪಕ್ಕಕ್ಕೆ ಹಾರಿ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. 
 
ಗಣರಾಜ್ಯೋತ್ಸವದ ರಜೆ ಇದ್ದುದರಿಂದ ಕಾರಿನಲ್ಲಿ ಆಗ್ರಾ ಕಡೆ ತೆರಳಿದ್ದ ಸ್ನೇಹಿತರು ಸೋಮವಾರ 9.30ರ ಸುಮಾರಿಗೆ ಕೋಸಿಕಲಾ ಸಮೀಪದ ಮಥುರಾದಲ್ಲಿ ರೈಲು ಬರುವ ವೇಳೆ ಸೆಲ್ಫಿ ತೆಗೆದುಕೊಳ್ಳುವ ನಿರ್ಧಾರದಿಂದ ಕಾರ್ ಪಾರ್ಕ್ ಮಾಡಿ ದುಸ್ಸಾಹಸಕ್ಕೆ ಕೈ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ. 
 
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ