ಔರಂಗಜೇಬ್‌ ರೋಡ್‌ ಇನ್ನು ಮುಂದೆ ಕಲಾಂ ರೋಡ್

ಶನಿವಾರ, 29 ಆಗಸ್ಟ್ 2015 (12:36 IST)
ನವದೆಹಲಿಯ ಔರಂಗಜೇಬ್‌ ರೋಡ್‌ ಇನ್ನು ಮುಂದೆ ಕಲಾಂ ರೋಡ್ ಆಗಿ ಗುರುತಿಸಿಕೊಳ್ಳಲಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಔರಂಗಜೇಬ್‌ ರಸ್ತೆಯನ್ನು ಕಲಾಂ ರಸ್ತೆ ಆಗಿ ಪುನರ್ನಾಮಕರಣ ಮಾಡುತ್ತಿರುವುದಾಗಿ ದೆಹಲಿ ಮಹಾನಗರ ಪಾಲಿಕೆ ಘೋಷಿಸಿದೆ. ಆದರೆ ಇದನ್ನು ನಿರ್ಧರಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಆಮಂತ್ರಿಸಿರಲಿಲ್ಲ ಎಂದು ತಿಳಿದು ಬಂದಿದೆ. 
 
ದೆಹಲಿ ಜನತೆಯ ಒತ್ತಾಸೆಯ ಮೇರೆಗೆ ಮಹಾನಗರಪಾಲಿಕೆ ಈ ಕ್ರಮ ಕೈಗೊಂಡಿದೆ. ಕೆಲ ದಿನಗಳ ಹಿಂದೆ ದೆಹಲಿಯ ಬಿಜೆಪಿ ಸಂಸದ ಮಹೇಶ್ ಗಿರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ರಸ್ತೆಗೆ ಕಲಾಂ ಹೆಸರಿಡುವಂತೆ ಮನವಿ ಮಾಡಿದ್ದರು. ಅಂತೆಯೇ ಬಿಜೆಪಿ ಸಂಸದರ ಒತ್ತಾಯಕ್ಕೆ ಜನತೆಯಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು. ಟ್ವಿಟ್ಟರ್‌ನಲ್ಲಿ ಕೂಡ ಈ ಕುರಿತು ಅಭಿಯಾನವೇ ನಡೆದಿತ್ತು.
 
'ಅಭಿನಂದನೆಗಳು. ಮಹಾನಗರ ಪಾಲಿಕೆ ಔರಂಗಜೇಬ್ ರಸ್ತೆ ಹೆಸರನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಘೋಷಿಸಲು ನಿರ್ಧರಿಸಿದೆ', ಎಂದು  ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ. 
 
ಕೇಜ್ರಿವಾಲ್ ಈ ಟ್ವೀಟ್ ಮಾಡಿದ ಒಂದು ಗಂಟೆಯಷ್ಟರಲ್ಲಿ ಈ ಟ್ವೀಟ್ 900 ಬಾರಿ ರೀಟ್ವೀಟ್ ಆಗಿದೆ. ಜತೆಗೆ ಬಿಜೆಪಿ ಸಂಸದನ ಪ್ರಸ್ತಾವನೆಯ ಕ್ರೆಡಿಟ್ ಪಡೆಯಲು ಕೇಜ್ರಿವಾಲ್ ಯತ್ನಿಸುತ್ತಿದ್ದಾರೆ ಎಂದು ಟ್ವಿಟರ್‌ನಲ್ಲಿ ಆರೋಪಿಸಲಾಗಿದೆ.
 
ಕಳೆದ ಜುಲೈ 27 ರಂದು ಕಲಾಂ ಕೊನೆಯುಸಿರೆಳೆದಿದ್ದರು. 

ವೆಬ್ದುನಿಯಾವನ್ನು ಓದಿ