ಆರ್‌ಎಸ್‌ಎಸ್‌ನಿಂದ ದೇಶವಿದ್ರೋಹಿ ಕೃತ್ಯಗಳಿಗೆ ಉತ್ತೇಜನ: ಆಜಮ್ ಖಾನ್

ಶುಕ್ರವಾರ, 24 ಅಕ್ಟೋಬರ್ 2014 (16:32 IST)
ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರಾದ್ಯಂತ ದೇಶವಿದ್ರೋಹಿ ಕೃತ್ಯಗಳಿಗೆ ಪ್ರೇರೇಪಣೆ ನೀಡುವುದರಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಸಚಿವರಾದ ಆಜಮ್ ಖಾನ್  ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. 

ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಖಾನ್, ಸಂಘದ ನಾಯಕರು ಮುಸ್ಲಿಮರಲ್ಲಿ ಅಶಾಂತಿಯನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಹಬ್ಬದ ಅವಧಿಯಲ್ಲಿ ಕೋಮುಗಲಭೆ ತಡೆಗಟ್ಟಲು ಸೂಕ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳಿಗೆ ಗೃಹ ಸಚಿವಾಲಯ ಹೊರಡಿಸಿದ ಎಚ್ಚರಿಕೆಯನ್ನು ಸಹ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 
 
ಕಳೆದ ಮೂರು ದಿನಗಳ  ಹಿಂದೆ ಲಖನೌನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಆರ್‌ಎಸ್ಎಸ್ ಸಂಘ ಸಂಚಾಲಕರಾದ ಮೋಹನ್ ಭಾಗ್ವತ್, ಭಾರತದಲ್ಲಿನ ಮುಸ್ಲಿಮರು ಹಿಂದುಗಳೇ ಎಂದಿದ್ದರು. ಈ ರೀತಿಯ ಹೇಳಿಕೆಗಳು  ಮುಸ್ಲಿಂ ಸಮುದಾಯದವರ ಭಾವನೆಗಳಿಗೆ ಘಾಸಿಯನ್ನುಂಟು ಮಾಡುತ್ತವೆ. ಭಾಗ್ವತ್ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ.  ಅನೇಕ ರಾಷ್ಟ್ರದ್ರೋಹಿ ಕೃತ್ಯಗಳಲ್ಲಿ ಆರ್‌ಎಸ್ಎಸ್ ಪಾತ್ರವಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.  ಆದ್ದರಿಂದ ಭಾಗ್ವತ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಖಾನ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. 
 
ಭಾರತ ಹಿಂದೂಗಳ ದೇಶ ಮತ್ತು ಹಿಂದುತ್ವ ಇದರ ಹೆಗ್ಗುರುತು. ಜರ್ಮನಿಯಲ್ಲಿ ವಾಸಿಸುವವರೆಲ್ಲರೂ ಜರ್ಮನ್ನರು ಎಂದು ಕರೆಸಿಕೊಳ್ಳುವಂತೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದುಗಳು ಎಂದು ಭಾಗ್ವತ್ ಹೇಳಿದ್ದರು. 

ವೆಬ್ದುನಿಯಾವನ್ನು ಓದಿ