ಶಾಸಕರಿಗೆ ಪೆನ್, ಪೊರಕೆ ನೀಡಿದ ಆಜಂ ಖಾನ್: ಮೋದಿಗೆ ಟಾಂಗ್

ಸೋಮವಾರ, 30 ಮಾರ್ಚ್ 2015 (13:27 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಆಗಾಗ ಟೀಕೆಗಳನ್ನು ಮಾಡುತ್ತ, ಅವುಗಳ ಮೂಲಕವೇ ಸದಾ ಸುದ್ದಿಯಲ್ಲಿ ಕಾಣಿಸಿಕೊಳ್ಳುವ ಉತ್ತರ ಪ್ರದೇಶದ ಸಚಿವ ಆಜಂ ಖಾನ್ ಎಲ್ಲ ಪಕ್ಷದ ಶಾಸಕರಿಗೆ ಒಂದು ಪೊರಕೆ ಮತ್ತು ಪೆನ್ ಉಡುಗೊರೆಯಾಗಿ ಕೊಡುವುದರ ಮೂಲಕ ಆಶ್ಚರ್ಯಕ್ಕೀಡು ಮಾಡಿದ್ದಾರೆ. 

ಪೆನ್ ಮತ್ತು ಪೊರಕೆಯ ಜತೆ ಒಂದು ಪತ್ರವನ್ನಿಟ್ಟುರುವ ಅವರು, ನಾನು ನಿಮಗೆ  ಎರಡು ಉಡುಗೊರೆಗಳನ್ನು ನೀಡುತ್ತಿದ್ದೇನೆ.  ಇದರಲ್ಲಿ ಯಾವುದು ಸಮಾಜದಲ್ಲಿರುವ ಹೊಲಸನ್ನು ನಿರ್ಮೂಲನೆ ಮಾಡಬಲ್ಲದು ಮತ್ತು ಕೇವಲ ಘೋಷಣೆಗಳಿಂದ ಸಮಾಜವನ್ನು ಬದಲಿಸಲಾಗದು ಎಂಬುದನ್ನು ಇವುಗಳಲ್ಲಿ ಯಾವುದು ಸಂಕೇತಿಸುತ್ತದೆ ಎಂಬುದನ್ನು ನೀವೆಲ್ಲರೂ ನಿರ್ಧರಿಸಬೇಕು ಎಂದು ಅದರಲ್ಲಿ ಬರೆದಿದ್ದಾರೆ. 
 
ಖಾನ್ ಈ ಉಡುಗೊರೆ ನೀಡುವ ಮೂಲಕ ಪ್ರಧಾನ ಮಂತ್ರಿ ಮೋದಿಯವರು ಘೋಷಿಸಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ವ್ಯಂಗ್ಯವಾಡುತ್ತಿರುವುದು ಸ್ಪಷ್ಟವಾಗುತ್ತದೆ.  
 
ಉಡುಗೊರೆ ಕಳುಹಿಸುವ ಮೊದಲು ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮೋದಿಯವರು ಜನರ ಕೈಯಿಂದ ಪೆನ್ ಕಸಿದುಕೊಂಡು ಪೊರಕೆ ಕೊಟ್ಟರು ಎಂದು ಕುಹಕವಾಡಿದ್ದರು. 
 
ಮಾರ್ಚ್ 26ರ ವಿಧಾನಸಭೆ ಅಧಿವೇಶನದ ನಂತರ  ಪೆನ್, ಕಸಬರಿಕೆ ಮತ್ತು ಪತ್ರವನ್ನೊಳಗೊಂಡ ಚೀಲವನ್ನು ಎಲ್ಲ ಶಾಸಕರಿಗೆ  ಕಳುಹಿಸಲಾಗಿದೆ. 
 
ಉಡುಗೊರೆಗಳ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾಧಾ ಮೋಹನ್ ದಾಸ್ ಅಗರ್ವಾಲ್ ಸ್ವಚ್ಛತಾ ಅಭಿಯಾನದ ಮೂಲಕ ಪ್ರಧಾನಿ ಮೋದಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಆದರೆ ಆಜಂ ಖಾನ್ ಅವರಿಂದ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ