ಗಡಿ ಕಾಯುವ ಸೈನಿಕರ ದುಃಸ್ಥಿತಿ ಬಿಚ್ಚಿಟ್ಟ ವಿಡಿಯೋ

ಮಂಗಳವಾರ, 10 ಜನವರಿ 2017 (09:04 IST)
ನಾವೆಲ್ಲರೂ ಬೆಚ್ಚಗೆ ಮನೆಯೊಳಗೆ ಮಲಗಲು ಕಾರಣ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರು. ನಮಗಾಗಿ ತಮ್ಮ ಜೀವ, ಜೀವನವನ್ನೇ ಮುಡಿಪಾಗಿಡುವ ಸೈನಿಕರ ಬಗ್ಗೆ ಸ್ಪೋಟಕ ವಿಚಾರವೊಂದು ಬಯಲಾಗಿದೆ. ಯೋಧನೊಬ್ಬ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿರುವ ಸೆಲ್ಫಿ ವಿಡಿಯೋ ಒಂದು ಸೈನಿಕರ ದುಃಸ್ಥಿತಿಯನ್ನು ಬಿಚ್ಚಿಟ್ಟಿದ್ದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. 
 
ಹೌದು ಬಿಎಸ್ಎಫ್ 29 ನೇ ಬೆಟಾಲಿಯನ್ ಯೋಧ ತೇಜ್ ಬಹಾದ್ದೂರ್ ಯಾದವ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮ್ಮ ದುಃಸ್ಥಿತಿಯನ್ನು ಬಿಚ್ಚಿಟ್ಟಿದ್ದು ಈ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ. 
 
ಬೆಳಗಿಂದ ಸಂಜೆಯವರೆಗೂ 11-12 ಗಂಟೆಗಳ ಕಾಲ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ನಿರಂತರವಾಗಿ ಗಡಿ ಕಾಯುತ್ತೇವೆ. ಆದರೆ ನಮಗೆ ನೀಡುವ ಬೆಳಗಿನ ಉಪಹಾರ ಅರಿಶಿಣ ಮಿಶ್ರಿತ ದಾಲ್, ಒಣಗಿದ ಪರೋಟಾ. ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಬೆಳಗಿನ ಉಪಹಾರಕ್ಕೆ ಸೀದು ಹೋಗಿರುವ ಆಹಾರವನ್ನು ನೀಡಲಾಗುತ್ತದೆ. ನಮಗೆ ಸಿಗುವ ರೇಷನ್‌ನಲ್ಲೂ ಮೇಲಾಧಿಕಾರಿಗಳ ಗೋಲ್ ಮಾಲ್ ಇರುತ್ತದೆ. ನಮ್ಮ ಪರಿಸ್ಥಿತಿ ಬಗ್ಗೆ ಯಾವುದೇ ಮಾಧ್ಯಮಗಳಲ್ಲಿ ತೋರಿಸಲಾಗುವುದಿಲ್ಲ, ಎಂದು ಸ್ಪೋಟಕ ಸತ್ಯವನ್ನು ಹೊರಹಾಕುವ ಧೈರ್ಯ ತೋರಿದ್ದಾನೆ ಸೈನಿಕ. ಈ ಕುರಿತು ಗಮನ ನೀಡುವಂತೆ ಅವರು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
 
ಗಡಿ ಕಾಯುವ ಸೈನಿಕರ ಬಗ್ಗೆ ರಾಜಕಾರಣಿಗಳು ಭಾಷಣದಲ್ಲಿ ಕರುಣಾಜನಕವಾಗಿ ಮಾತನಾಡುತ್ತಾರೆ. ಆದರೆ ಅವರ ದುಃಸ್ಥಿತಿಯ ಬಗ್ಗೆ ಅವರಿಗರಿವಾಗದಿರುವುದು ವಿಪರ್ಯಾಸ. 
 
ನಮ್ಮ ದೇಶವನ್ನು ರಕ್ಷಿಸುವ ಸೈನಿಕರ ಈ ದುಃಸ್ಥಿತಿ ಈಗ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ಸಚಿವರು ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ಎಫ್ ಯಾದವ್ ಮದ್ಯವ್ಯಸನಿಯಾಗಿದ್ದು, ಅವರಿಗೆ ನಿಯಮಿತ ಆಪ್ತಸಮಾಲೋಚನೆ ಅಗತ್ಯವಿದೆ ಎಂದಿದೆ.
ಗಡಿ ಕಾಯುವ ಸೈನಿಕರ ದುಃಸ್ಥಿತಿ ಬಿಚ್ಚಿಟ್ಟ ವಿಡಿಯೋ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ