ಕ್ರಿಶ್ಚಿಯನ್ನರು ಧರ್ಮ ಕಾರ್ಯದಲ್ಲೂ, ಮತಾಂತರದಲ್ಲೂ ಭಾಗಿ: ಬಾಬಾ ರಾಮದೇವ್

ಬುಧವಾರ, 3 ಆಗಸ್ಟ್ 2016 (16:19 IST)
ಕ್ರಿಶ್ಚಿಯನ್ನರು ಧರ್ಮಕಾರ್ಯಗಳನ್ನು ಮಾಡಿದ್ದಾರೆ. ಆದರೆ ಮತಾಂತರದಂತಹ ಚಟುವಟಿಕೆಗಳಲ್ಲಿ ಕೂಡ ಭಾಗಿಯಾಗಿದ್ದಾರೆ ಎಂದು ಹೇಳುವುದರ ಮೂಲಕ ಯೋಗ ಗುರು ಬಾಬಾ ರಾಮದೇವ್ ಹೊಸದೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

8 ನೇ ಹಿಂದೂ ಆಧ್ಯಾತ್ಮಿಕ ಮತ್ತು ಸೇವೆ ಉದ್ಘಾಟನಾ ಹಬ್ಬ- 2016ರಲ್ಲಿ ಭಾಗವಹಿಸಿ ಮಾತನ್ನಾಡುತ್ತಿದ್ದ ಬಾಬಾ ರಾಮದೇವ್,  ಅವರು ಸೇವೆಯನ್ನು ಮಾಡುತ್ತಾರೆ- ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಾರೆ. ಜತೆಗೆ ಮತಾಂತರದಲ್ಲೂ ತೊಡಗಿರುತ್ತಾರೆ. ನಾವು ಯೋಗಾ ಕಲಿಸುವುದನ್ನು ಸೇರಿದಂತೆ ವಿವಿಧ ಸೇವೆಯನ್ನು ಪುಕ್ಕಟ್ಟೆಯಾಗಿ ಮಾಡುತ್ತೇವೆ. ಆದರೆ ನಾವು ಯಾರ ಧರ್ಮವನ್ನು ಬದಲಿಸಿಲ್ಲ.ಅವರ ಬದುಕನ್ನಷ್ಟೇ ಬದಲಿಸುತ್ತೇವೆ ಎಂದರು.

ಕ್ರಿಶ್ಚಿಯನ್ ಸಮುದಾಯದವರಿಂದ ಧರ್ಮಕಾರ್ಯ ಮಾಡುವುದನ್ನು ಕಲಿತುಕೊಳ್ಳಬೇಕು ಎಂದು ಜನರು ಹೇಳುತ್ತಾರೆ. ಆದರೆ ಲಕ್ಷಗಟ್ಟಲೆ ಹಿಂದೂ ಸಾಧುಗಳು, ಧರ್ಮಾರ್ಥ ಸಂಸ್ಥೆಗಳು ಸಹ ಇಂತಹದ್ದೇ ಕೆಲಸವನ್ನು ಮಾಡುತ್ತಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಶೋಷಣೆ ಮಾಡಲಾಗುತ್ತಿದೆ, ಅದರಲ್ಲೂ ದಲಿತರ ಮೇಲೆ ವಿಶೇಷವಾಗಿ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

ಸ್ವದೇಶಿ ಉತ್ಪಾದನೆಗಳ ಬಳಕೆ ಮಾಡಿ ಎಂದು ಮನವಿ ಮಾಡಿದ ಅವರು ಪತಂಜಲಿ ಉತ್ಪನ್ನಗಳಿಂದ ಬರುವ ಲಾಭವನ್ನು ಧರ್ಮಾರ್ಥ ಕಾರ್ಯಗಳಿಗೆ ವಿನಿಯೋಗಿಸುವುದಾಗಿ ಹೇಳಿದ್ದಾರೆ.

ವಿದೇಶಗಳಿಗೆ ಒಂದು ರೂಪಾಯಿ ಕೂಡ ಹೋಗಬಾರದು. ಸ್ವದೇಶಿ ಉತ್ಪನ್ನಗಳನ್ನು ಬಳಸುತ್ತೇವೆ ಎಂದು ಪ್ರತಿಜ್ಞೆ ಮಾಡಿ ಎಂದು ಬಾಬಾ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ