ರಾಮ್‌ಪಾಲ್ ಬಂಧನ: ಇಂದು ಕೋರ್ಟ್‌ಗೆ ಹಾಜರು

ಗುರುವಾರ, 20 ನವೆಂಬರ್ 2014 (11:16 IST)
ಪೊಲೀಸರ ಜೊತೆ ಎರಡು ವಾರಗಳ ಸಂಘರ್ಷದ ಬಳಿಕ ವಿವಾದಾತ್ಮಕ ದೇವಗುರು ರಾಮ್‌ಪಾಲ್  ಅವರನ್ನು ಹರ್ಯಾಣ ಆಶ್ರಮದಿಂದ ನಿನ್ನೆ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಇಂದು ಕೋರ್ಟ್‌‍ ಎದುರು ಅವರನ್ನು ಹಾಜರುಪಡಿಸಲಾಗುತ್ತದೆ. 63 ವರ್ಷ ವಯಸ್ಸಿನ ರಾಮ್‌ಪಾಲ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದೆ.
 
ಕಳೆದ ನಾಲ್ಕು ವರ್ಷಗಳಲ್ಲಿ 43 ಬಾರಿ ಕೋರ್ಟ್‌ಗೆ ಹಾಜರಾಗಲು ವಿಫಲರಾಗಿದ್ದರಿಂದ ನ್ಯಾಯಾಲಯ ನಿಂದನೆ ಎದುರಿಸುತ್ತಿದ್ದರು. ಸಮನ್ಸ್‌ಗಳನ್ನು ಪುನಃ ಪುನಃ ಕಡೆಗಣಿಸುತ್ತಿದ್ದ ರಾಮ್‌ಪಾಲ್ ಅವರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅವರ ಜಾಮೀನು ರದ್ದಾಗಿದ್ದರಿಂದ ಬುಧವಾರ ತಡರಾತ್ರಿಯಲ್ಲಿ ಅವರನ್ನು ಬಂಧಿಸಲಾಯಿತು.
 
ಪೊಲೀಸರು ಸತ್ಲೋಕ್ ಆಶ್ರಮದ ರಾಮ್‌ಪಾಲ್ ಕೋಣೆಗೆ ಮುತ್ತಿಗೆ ಹಾಕಿ 10 ವಾಹನಗಳ ಬೆಂಗಾವಲಿನೊಂದಿಗೆ ಆಂಬ್ಯುಲೆನ್ಸ್‌ನಲ್ಲಿ ಒಯ್ದರು. ಆದರೆ ರಾಮ್‌ಪಾಲ್ ಅವರ ಸಶಸ್ತ್ರ ಬೆಂಬಲಿಗರು ಬಂಧನವನ್ನು ತಪ್ಪಿಸಲು ಪ್ರಯತ್ನಿಸಿ ಪೊಲೀಸರ ಮೇಲೆ ಆಸಿಡ್ ಪೋಚ್‌ಗಳನ್ನು ಎಸೆದರು.  ಪಂಚಕುಲಾದಲ್ಲಿರುವ ಆಸ್ಪತ್ರೆಯೊಂದಕ್ಕೆ ಅವರನ್ನು ಸೇರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
 
 ಇಂದು ರಾಮ್‌ಪಾಲ್  ಅವರನ್ನು ಆಸ್ಪತ್ರೆಯಿಂದ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ರಾಮ್‌ಪಾಲ್  ತನ್ನ 5000 ಅನುಯಾಯಿಗಳೊಂದಿಗೆ ಆಶ್ರಮದಲ್ಲಿ ಅಡಗಿದ್ದು, ಮಹಿಳೆ ಮತ್ತು ಮಕ್ಕಳನ್ನು ರಕ್ಷಾಕವಚದಂತೆ ಬಳಸಿಕೊಂಡು ಬಂಧನವನ್ನು ತಪ್ಪಿಸಿಕೊಳ್ಳುತ್ತಿದ್ದರು.
 
 ಬಾಬಾ ಕಮಾಂಡೋಗಳು ಎಂದು ಕರೆಯಲಾಗುತ್ತಿದ್ದ ಅವರ ಕುಖ್ಯಾತ ಸೇನೆ ಆಶ್ರಮದಲ್ಲಿ ಇನ್ನೂ 2000ದಿಂದ 3000 ಜನರನ್ನು ಇರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ