ಮೋದಿ ಹೇಳಿಕೆಗೆ ಬೆಂಬಲ ವ್ಯಕ್ತ ಪಡಿಸಿದ ಬಲೂಚ್ ನಾಯಕರ ವಿರುದ್ಧ ಕೇಸ್ ದಾಖಲಿಸಿದ ಪಾಕ್

ಮಂಗಳವಾರ, 23 ಆಗಸ್ಟ್ 2016 (17:36 IST)
ಬಲೂಚಿಸ್ತಾನದ ಬಗ್ಗೆ ಪ್ರಧಾನಿ ಮೋದಿ ಅವರ ಹೇಳಿಕೆಗೆ ಬೆಂಬಲ ಘೋಷಿಸಿದ್ದ ಬಲೂಚ್ ಪ್ರತ್ಯೇಕತಾವಾದಿ ನಾಯಕರ ಮೇಲೆ ಪಾಕಿಸ್ತಾನ ಪ್ರಕರಣ ದಾಖಲಿಸಿದೆ.
 
ಬಲೂಚ್ ನಾಯಕರಾದ ಬ್ರಹಾಂದಾಗ್ ಬುಗ್ತಿ, ಬಾನುಕ್ ಕರಿಮಾ ಬಲೂಚ್ ಹಾಗೂ ಹರ್ಬಿಯಾರ್ ಮರ್ರಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.  
 
ಮುನಿರ್ ಅಹಮದ್, ಮೌಲಾನಾ ಮುಹಮ್ಮದ್ ಅಸ್ಲಮ್, ಮುಹಮ್ಮದ್ ಹುಸೇನ್, ಗೌಲಮ್ ಯಾಸೀನ್ ಜಾಟಕ್ ಮತ್ತು ಮೊಹಮ್ಮದ್ ರಹೀಮ್ ಎಂಬುವವರು ಖುಜ್ದಾರ್ ಪ್ರದೇಶದ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಬಲೂಚ್ ಪ್ರತ್ಯೇಕತಾವಾದಿ ನಾಯಕರ ಮೇಲೆ ಐದು ಪ್ರತ್ಯೇಕ ಪ್ರಕರಣಗಳನ್ನು ಹೇರಲಾಗಿದೆ ಎಂದು ಪಾಕ್ ಮಾಧ್ಯಮವೊಂದು ವರದಿ ಮಾಡಿದೆ.
 
ಆಗಸ್ಟ್ 15 ರಂದು ಮೋದಿ ಅವರು ಹೇಳಿದ್ದ ಹೇಳಿಕೆಯನ್ನು ಇವರೆಲ್ಲ ಬೆಂಬಲಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋದಿ ಅವರಿಗೆ ಹಲವಾರು ಬಾರಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. 
 
ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವಂತೆ ಬಲೂಚ್ ನಾಯಕರು ಮೋದಿಯವರಲ್ಲಿ ಕೇಳಿಕೊಂಡಿದ್ದಾರೆ ಎಂದು ದೂರುದಾರರಲ್ಲೊಬ್ಬನಾದ ಅಹಮದ್ ಹೇಳಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ