ನಾಳೆ ಬೆಂಗಳೂರು ಬಂದ್: ಅಗತ್ಯ ಸೇವೆಗಳು ದೊರೆಯಲಿವೆಯೇ ಎನ್ನುವ ಗೊಂದಲದಲ್ಲಿ ಜನತೆ

ಬುಧವಾರ, 30 ಜುಲೈ 2014 (16:33 IST)
ಗುರುವಾರ ಸುಮಾರು 50 ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು , ಆ ದಿನ ಅಗತ್ಯ ಸೇವೆಗಳು ಸಿಗಲಿವೆಯೇ?,   ಶಾಲಾ ಕಾಲೇಜುಗಳಲ್ಲಿ ಸರ್ಕಾರ / ಖಾಸಗಿ ಸಂಸ್ಥೆಗಳು, ಕಾರ್ಯನಿರ್ವಹಿಸಲಿವೆಯೇ ಎಂಬ ಗೊಂದಲ ನಾಗರಿಕರಲ್ಲಿದೆ. 

ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಗಣನೀಯವಾಗಿ ಹೆಚ್ಚುತ್ತಿರುವುದನ್ನು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದ್ದು, ತಮ್ಮ ಪ್ರತಿಭಟನೆ ಸಂಪೂರ್ಣವಾಗಿ ಯಶಸ್ಸನ್ನು ಕಾಣುತ್ತದೆ ಎಂಬ ಬಗ್ಗೆ ಸಂಸ್ಥೆಗಳು ವಿಶ್ವಾಸ ವ್ಯಕ್ತಪಡಿಸಿವೆ. 
 
ಬಂದ್ ನಡೆಯುವ ದಿನ ಶಾಲಾ ಕಾಲೇಜುಗಳನ್ನು ಮುಚ್ಚಲಾಗುವುದಿಲ್ಲ ಎಂಬ ನಿಲುವಿಗೆ  ಶಿಕ್ಷಣ ಇಲಾಖೆ ಅಂಟಿಕೊಂಡಿದೆ. " ಇಲ್ಲಿ ಆ ಪ್ರಶ್ನೆಗೆ ಅವಕಾಶವೇ ಇಲ್ಲ. ಎಲ್ಲಾ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹ್ಸಿನ್  ಹೇಳಿದ್ದಾರೆ. 
 
ಬುಧವಾರ ಸಂಜೆ ಅಥವಾ ಗುರುವಾರ ಬೆಳಿಗ್ಗಿನ ಪರಿಸ್ಥಿತಿ ಅವಲೋಕಿಸಿ ತಾವು ಶಾಲೆ ನಡೆಸಬೇಕೋ, ಬೇಡವೋ ಎಂಬ ನಿರ್ಧಾರವನ್ನು ಮಾಡುತ್ತೇವೆ ಎಂದು ಕೆಲವು ಖಾಸಗಿ ಶಾಲೆಗಳು ಹೇಳಿವೆ. ಬಸ್ ಸಂಚಾರ ಇರಲಿದೆ ಅಥವಾ ಇಲ್ಲವೋ ಎಂದು ಇನ್ನೂ ಅಂತಿಮ ನಿರ್ಧಾರ ತಳೆದಿಲ್ಲ ಎಂದು ಬಿಎಮ್‌ಟಿಸಿ ವಕ್ತಾರರು ಹೇಳಿದ್ದಾರೆ. 
 
 ಸರ್ಕಾರಿ ಶಾಲಾ ಶಿಕ್ಷಕರು ಸೇರಿದಂತೆ 45,000 ಕರ್ನಾಟಕ ಸರ್ಕಾರಿ ನೌಕರರ ಸಂಘದ ಸದಸ್ಯರು, ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಸಾರಿಗೆ ಸೇವೆಗಳ ಲಭ್ಯತೆಯನ್ನು ಅವಲಂಬಿಸಿದೆ ಎಂದು ಅವರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ