ಬೆಂಗಳೂರು: ವೈಫೈ ಸೌಲಭ್ಯ ಉಳ್ಳ ದೇಶದ ಮೊದಲ ರೇಲ್ವೆ ನಿಲ್ದಾಣ

ಬುಧವಾರ, 29 ಅಕ್ಟೋಬರ್ 2014 (13:30 IST)
ಬೆಂಗಳೂರು ನಗರ ರೈಲು ನಿಲ್ದಾಣ ತನ್ನ ಪ್ರಯಾಣಿಕರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಒದಗಿಸಲು ವೈಫೈ ಸೌಲಭ್ಯ  ಕಲ್ಪಿಸುವ ಮೂಲಕ, ಈ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿಕೊಂಡ ದೇಶದ ಮೊದಲ ರೈಲು ನಿಲ್ದಾಣ ಎನಿಸಿಕೊಂಡಿದೆ. 

ಆರಂಭದಲ್ಲಿ 30 ನಿಮಿಷಗಳ ಕಾಲ ತಮ್ಮ ಮೊಬೈಲ್ ದೂರವಾಣಿಗಳಲ್ಲಿ ಪ್ರಯಾಣಿಕರು ಈ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು.  30 ನಿಮಿಷಗಳನ್ನು ಮೀರಿ ಬಳಸುವುದಾದರೆ, ಬಳಕೆದಾರ ವೈಫೈ ಸಹಾಯ ವಿಭಾಗದಲ್ಲಿ ಲಭ್ಯವಿರುವ ಸ್ಕ್ರಾಚ್ ಕಾರ್ಡ್ ಖರೀದಿಸಬಹುದು.
 
ಈ ಸ್ಕ್ರಾಚ್ ಕಾರ್ಡ್ ಬೆಲೆ  30 ನಿಮಿಷಕ್ಕೆ 25 ರೂಪಾಯಿಗಳಿದ್ದು, ಒಂದು ಗಂಟೆಗೆ 35 ರೂಪಾಯಿಗಳಾಗಿವೆ. ಇವುಗಳಿಗೆ 24 ಗಂಟೆಗಳ ಮಾನ್ಯತೆ ಇರುತ್ತದೆ.  ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿ ಆನ್‌ಲೈನ್ ಮೂಲಕ  ಹೆಚ್ಚುವರಿ ಬ್ರೌಸಿಂಗ್ ಸಮಯವನ್ನು ಖರೀದಿ ಮಾಡಬಹುದು ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
 
ರೈಲ್‌ಟೈಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ರಿಟೈಲ್ ಬ್ರಾಡಬಾಂಡ್ ಡಿಸ್ಟ್ರಿಬ್ಯುಸನ್ ಮಾಡೆಲ್ ರೈಲ್‌ವೈರ್ ಮೂಲಕ  ಈ  ವೈಫೈ ಸೌಲಭ್ಯವನ್ನು ನೀಡಲಾಗುವುದು.
 
ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವರಾದ ಸದಾನಂದ ಗೌಡ  ವೈಫೈ ಸೇವೆಯನ್ನು ಉದ್ಘಾಟಿಸಿದ ನಂತರ ಈ ಅಧಿಕೃತ ಸೇವೆ ಅನುಷ್ಠಾನಕ್ಕೆ ಬರುವ ಮೂಲಕ ಬೆಂಗಳೂರು ರೈಲ್ವೆ ನಿಲ್ದಾಣ ಪ್ರಯಾಣಿಕರಿಗೆ ವೈಫೈ ಸೌಲಭ್ಯ ನೀಡಿದ ದೇಶದ ಮೊದಲ ರೈಲು ನಿಲ್ದಾಣ ಎನಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರಮುಖ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ನೀಡಲು ರೈಲ್ವೆ ಇಲಾಖೆಯಿಂದ ರೈಲ್‌ಟೈಲ್‌ಗೆ ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ