ಮೂವರು ಸಚಿವರ ವಿರುದ್ಧ ಕೇಸ್ ದಾಖಲಿಸಿದ್ದ ಪಿಎಸ್‌ಐ ಮೇಲೆ ಕಾಂಗ್ರೆಸ್ ಮುಖಂಡನ ಹಲ್ಲೆ

ಶುಕ್ರವಾರ, 25 ಜುಲೈ 2014 (15:07 IST)
ಮೂವರು ಸಚಿವರು, ಬಿಬಿಎಂಪಿ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಿ ದಕ್ಷತೆಯನ್ನು ಮೆರೆದಿದ್ದ ಸಬ್‌ಇನ್ಸ್‌ಪೆಕ್ಟರ್‌ ಮೇಲೆ ಕಾಂಗ್ರೆಸ್ ಮುಖಂಡ ಮತ್ತು ಆತನ ಬೆಂಬಲಿಗರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. 
 
ಸಚಿವರೊಬ್ಬರ ಕಾರಿಗೆ ದಂಡ  ವಿಧಿಸಿದ ತಪ್ಪಿಗೆ ಇತ್ತೀಚೆಗಷ್ಟೆ ವರ್ಗವಾಗಿ ಬಂದಿದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಟಿ..ಆರ್.ಶ್ರೀನಿವಾಸ್ ಮೇಲೆ ಕಾಂಗ್ರೆಸ್ ಮುಖಂಡರು ಹಲ್ಲೆ ನಡೆಸಿದ್ದಾರೆ. 
 
ಶೇಷಾದ್ರಿಪುರಂ ನೆಹರು ಸರ್ಕಲ್ ಬಳಿಯಿರುವ ಜನನಿಬಿಡ ಪ್ರದೇಶದ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದರಿಂದ ಕಾರಿನ ಮಾಲೀಕರಾದ ಕಾಂಗ್ರೆಸ್ ಮುಖಂಡ ಶಿವರಾಮೇಗೌಡ ಅವರಿಗೆ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೋಟಿಸ್ ನೀಡಿದ್ದಾರೆ. ಇದರಿಂದ ಕೆಂಡಾಮಂಡಲವಾದ ಮುಖಂಡ ಮತ್ತು ಆತನ ಬೆಂಬಲಿಗರು ಅಸಭ್ಯ ಭಾಷೆಗಳನ್ನು ಬಳಸಿದ್ದಲ್ಲದೇ ಸಾರ್ವಜನಿಕವಾಗಿ ಎಳೆದಾಡಿ ಹಲ್ಲೆ ಮಾಡಿ ವರ್ಗಾ ಮಾಡಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ      
 
ಪೊಲೀಸ್ ಸಬ್ ಇನ್ಸಪೆಕ್ಟರ್ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಶಿವರಾಮೇಗೌಡ ಮತ್ತು ಆತನ ಬೆಂಬಲಿಗರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ನೋ ಪಾರ್ಕಿಂಗ್‌ನಲ್ಲಿದ್ದ ಇನೋವಾ ಕಾರನ್ನು ತೆಗೆಯುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪಾಲಿಸಲಿಲ್ಲ. ಆದ್ದರಿಂದ ನೋಟಿಸ್ ನೀಡಿದ್ದೇನೆ. ಇದರಿಂದ ಕೋಪಗೊಂಡ ಶಿವರಾಮೇಗೌಡ ಮತ್ತು ಆತನ ಬೆಂಬಲಿಗರು ನನ್ನ ಪೊಲೀಸ್ ಸಮವಸ್ತ್ರ ಹರಿದು ಹಾಕಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿದ್ದಲ್ಲದೇ ಹಲ್ಲೆ ಕೂಡಾ ಮಾಡಿದ್ದಾರೆ ಎಂದು ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸ್ ದೂರಿನಲ್ಲಿ ದಾಖಲಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ