ಬೆಂಗಳೂರು: ಶಿಶುಕಾಮಕ್ಕೆ ಬಲಿಯಾದ ಎಲ್‌ಕೆಜಿ ಬಾಲೆ

ಬುಧವಾರ, 22 ಅಕ್ಟೋಬರ್ 2014 (09:20 IST)
ಕಳೆದ ಮಂಗಳವಾರ ಬೆಂಗಳೂರು ಮತ್ತೆ ಅನಾಗರಿಕ, ಅಮಾನುಷ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಯಿತು. ಕಳೆದ 2,3 ತಿಂಗಳ ಹಿಂದೆ ಮಾರತಹಳ್ಳಿಯ ಖಾಸಗಿ ಶಾಲೆಯಲ್ಲಿ ನಡೆದ 6 ವರ್ಷದ ಮಗುವಿನ ಮೇಲೆ ಅತ್ಯಾಚಾರದ ಪ್ರಕರಣ ಮನಸ್ಸಿನಿಂದ ಮಾಸುವ ಮುನ್ನವೇ ಅದೇ ರೀತಿಯ ಶಿಶು ಕಾಮದ ಕುಕೃತ್ಯ ಮತ್ತೆ ಬೆಳಕಿಗೆ ಬಂದಿದ್ದು  ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಶಾಲೆಯಲ್ಲಿಯೇ ಲೈಂಗಿಕ ದೌರ್ಜನ್ಯ ನಡೆದಿದೆ. 

ನಗರದ ಜಾಲಹಳ್ಳಿಯಲ್ಲಿರುವ ಖಾಸಗಿ ಶಾಲೆ ಆರ್ಕಿಡ್ಸ್ ಡಿ ಇಂಟರ್‌ನ್ಯಾಶನಲ್‌ನಲ್ಲಿ ಈ ಪಾತಕ ಕೃತ್ಯ ನಡೆದಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಎಲ್‌ಕೆಜಿ ಓದುತ್ತಿರುವ ಮಗಳನ್ನು ಮನೆಗೆ ಕರೆದು ತರಲು ತಾಯಿ ಶಾಲೆಗೆ ಹೋದ ಸಂದರ್ಭದಲ್ಲಿ ಮಗು ಹೊಟ್ಟೆ ನೋವೆಂದು ಅಳುತ್ತಿರುವುದು ಗಮನಕ್ಕೆ ಬಂದಿದೆ. ಮನೆಗೆ ಹೋದ ನಂತರ ಆಕೆಗೆ ಜ್ವರ ಕೂಡ ಬಂದಿದೆ. ಅಲ್ಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಗುಪ್ತಾಂಗದ ಮೇಲೆ ಗಾಯವಿರುವ ಗುರುತು ಪತ್ತೆಯಾಗಿದ್ದು ವೈದ್ಯರು ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಶಂಕಿಸಿದ್ದಾರೆ.
 
ಬೆದರಿದ ತಾಯಿ ಮಗುವಿನ ತಾಯಿ ಆಕೆಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕೊಂಡೊಯ್ದಿದ್ದಾಳೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಖಚಿತವಾಗಿದೆ. ಆಘಾತಕ್ಕೀಡಾದ ಪೋಷಕರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
 
ಆದರೆ ಈ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಶಾಲೆಯ ಇತರ ಮಕ್ಕಳ ಪೋಷಕರ ಅಭಿಪ್ರಾಯ. ಆದರೆ ಮಗು ಬೆಳಿಗ್ಗೆಯಿಂದ ಶಾಲೆಯಲ್ಲಿಯೇ ಇದ್ದು, ಮಧ್ಯಾಹ್ನ 12 ರ ಸುಮಾರಿಗೆ ಶಾಲೆಗೆ ಬಂದ ಆಕೆಯ ತಾಯಿ ಅಳುತ್ತಿದ್ದ ಮಗಳ ಬಳಿ ತಾಯಿ ಏನಾಯಿತು ಎಂದು ಕೇಳಿದಾಗ ಅಂಕಲ್ ಹೊಡೆದ್ರು ಎಂದು ಉತ್ತರಿಸಿದ್ದಾಳೆ. ಹೀಗಾಗಿ ಆಕೆಯ ಮೇಲೆ ಶೋಷಣೆಯಾಗಿರುವುದು ಶಾಲೆಯಲ್ಲಿಯೇ ಎಂದು ಬಹುತೇಕ ಖಚಿತವಾಗಿದೆ. ಶಾಲೆಯಲ್ಲಿ 80ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಪೊಲೀಸರು ಅದರಲ್ಲಿ ರೆಕಾರ್ಡ್ ಆಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
 
ಪೋಕ್ಸೋ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಶಾಲಾ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಾಲಾ ಆಡಳಿತ ಮಂಡಳಿ ಇನ್ನು ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. 
 
ಮಲ್ಲೇಶ್ವರಂ ಉಪವಿಭಾಗ ಎಸಿಪಿ ಸಾರಾ ಫಾತಿಮಾ ನೇತೃತ್ವದ ವಿಶೇಷ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ