ಬರಾಕ್ ಒಬಾಮಾ- ನರೇಂದ್ರ ಮೋದಿ ಮಹತ್ವದ ಒಪ್ಪಂದಗಳಿಗೆ ಹಸ್ತಾಕ್ಷರ

ಭಾನುವಾರ, 25 ಜನವರಿ 2015 (18:01 IST)
ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಿದ್ದು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
 
ದ್ವಿಪಕ್ಷೀಯ ಮಾತುಕತೆ ಬಳಿಕ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಜಂಟಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾಗರಿಕ ಪರಮಾಣು ಸೇರಿದಂತೆ ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದರು.
 
ಬ್ಯುಸಿ ಷೆಡ್ಯೂಲ್‌ನಲ್ಲೂ ಭಾರತ ಪ್ರವಾಸ ಕೈಗೊಂಡಿರುವ ಬರಾಕ್ ಒಬಾಮಾರಿಗೆ ಧನ್ಯವಾದ ಸಲ್ಲಿಸಿದರು. ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿರುವುದು ಭಾರತ ಮತ್ತು ಅಮೆರಿಕದ ಬಾಂಧವ್ಯ ವೃದ್ಧಿಗೆ ಪೂರಕವಾಗಲಿದೆ ಎಂದರು.
 
ಉಭಯ ದೇಶಗಳ ನಡುವೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅದರಂತೆ 6 ವರ್ಷಗಳ ಹಳೆಯ ನಾಗರಿಕ ಪರಮಾಣು ಒಪ್ಪಂದ ಜಾರಿಯಾಗುತ್ತಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದರು. ರಕ್ಷಣಾ ಕ್ಷೇತ್ರದ ಒಪ್ಪಂಗಳ ನವೀಕರಣಕ್ಕೆ ಸಮ್ಮತಿ, ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ವ್ಯವಹಾರದಲ್ಲಿ ಪ್ರಗತಿ ಕುರಿತಂತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ ಎಂದರು.
 
ಇವುಗಳಲ್ಲಿ ಮುಖ್ಯವಾಗಿ ಭಯೋತ್ಪಾದನೆ ವಿರುದ್ಧ ಸಮರಕ್ಕೆ ಅಮೆರಿಕ ಸಾಥ್ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ