ಬಿಬಿಎಂಪಿ ಚುನಾವಣೆ: ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆ ಇಂದು

ಶುಕ್ರವಾರ, 3 ಜುಲೈ 2015 (12:09 IST)
ರಾಜ್ಯ ಚುನಾವಣಾ ಆಯೋಗವು ಬಿಬಿಎಂಪಿ ಚುನಾವಣೆಗೆ ಅಧಿಕೃತ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದರೂ ಕೂಡ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡುವ ಪ್ರಯತ್ನದಲ್ಲಿದ್ದು, ಸರ್ಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯು ಇಂದು ನಡೆಯಲಿದೆ.  
 
ಮುಖ್ಯ ನ್ಯಾ. ಹೆಚ್.ಎಲ್.ದತ್ತು ಅವರಿರುವ ಏಕ ಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ. 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಮಾಡಿ ನೂತನ ಮೀಸಲಾತಿ ಪಟ್ಟಿ ತಯಾರಿಸಿ ಚುನಾವಣೆ ನಡೆಸಲು ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ಇದಾಗಿದೆ. ಈಗಾಗಲೇ ಸರ್ಕಾರದ ಈ ಮನವಿಗೆ ಹೈಕೋರ್ಟ್ ನಕಾರ ತೋರಿದ್ದು, ಶೀಘ್ರವೇ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. 
 
ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸುಪ್ರೀಂ ನಿರ್ದೇಶನದಂತೆ ಆಗಸ್ಟ್ 5 ರ ಒಳಗೆ 2001ರ ಜನಗಣತಿ ಆಧಾರದಲ್ಲಿಯೇ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚಿಸಿತ್ತು. 
 
ಇನ್ನು ಚುನಾವಣಾ ಆಯೋಗವು ಈಗಾಗಲೇ ಕೋರ್ಟ್ ಆದೇಶದಂತೆ ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, ಜುಲೈ 28ರಂದು ಮತದಾನ ನಡೆಯಲಿದೆ.  

ವೆಬ್ದುನಿಯಾವನ್ನು ಓದಿ