ಬಿಬಿಎಂಪಿ ಚುನಾವಣೆ: ಸುಪ್ರೀಂ ಆದೇಶ ಪ್ರತಿ ಲಭ್ಯ

ಶನಿವಾರ, 4 ಜುಲೈ 2015 (13:49 IST)
ಬಿಬಿಎಂಪಿ ಚುನಾವಣೆಗೆ ಅವಕಾಶ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ನಿನ್ನೆಯಿಂದ 8 ವಾರಗಳ ಕಾಲ ಅವಕಾಶ ನೀಡಿದ್ದು, ಸೆಪ್ಟಂಬರ್ 3ರ ಒಳಗೆ ಚುನಾವಣೆ ನಡೆಸಬೇಕೆಂದು ಸೂಚಿಸಿದೆ. 
 
ಕೋರ್ಟ್‌ನ ಆದೇಶ ಪ್ರತಿಯನ್ನು ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ  ಹಿನ್ನೆಲೆಯಲ್ಲಿ ಈ ವಿಷಯ ನಿಖರವಾಗಿ ತಿಳಿದು ಬಂದಿದೆ. ಆದರೆ ನಿನ್ನೆ ಆದೇಶ ಪ್ರತಿ ಕೈ ಸೇರುವುದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಕೆಲ ರಾಜ್ಯ ನಾಯಕರು ಅಕ್ಟೋಬರ್ 5ರ ಒಳಗೆ ಚುನಾವಣೆ ನಡೆಸಲು ಸೂಚಿಸಿದೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದರು. ಕಾರಣ ಈ ಹಿಂದೆ ಇದೇ ವಿಷಯ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್, ಆಗಸ್ಟ್ 5ರಂದು ಚುನಾವಣೆ ನಡೆಸಿ ಎಂದು ಸರ್ಕಾರಕ್ಕೆ ಆದೇಶಿಸಿತ್ತು. ಆದ್ದರಿಂದ ಆಗಸ್ಟ್ 5ರಿಂದ ಮತ್ತೆ ಎರಡು ತಿಂಗಳುಗಳ ಅವಕಾಶ ನೀಡಿದೆ ಎಂದು ಕೆಲ ನಾಯಕರು ಪರಿಗಣಿಸಿದ್ದರು. ಆದರೆ ಕೋರ್ಟ್ ನಿನ್ನೆಯಿಂದ 8 ವಾರಗಳ ಕಾಲಾವಕಾಶ ನೀಡಿದೆ. 
 
ಇನ್ನು 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಬಳಿಕ ನೂತನ ಮೀಸಲಾತಿ ಪಟ್ಟಿ ಸಿದ್ಧಪಡಿಸಿ ಚುನಾವಣೆ ನಡೆಸಲು ಅವಕಾಶ ನೀಡಬೇಕೆಂದು ಹೈಕೋರ್ಟ್‌ಗೆ ಸರ್ಕಾರ ಮನವಿ ಮಾಡಿತ್ತು. ಆದರೆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದ ಕಾರಣ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಅರ್ಜಿ ವಿಚಾರಣೆ ನಡೆಸಿ ಆದೇಶಿಸಿದ್ದ ನ್ಯಾಯಾಲಯ, ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆಗೆ ಅವಕಾಶ ನೀಡದೆ ಚುನಾವಣೆಗೆ 8 ವಾರಗಳ ಅವಕಾಶ ಕಲ್ಪಿಸಿ ಆದೇಶಿಸಿದೆ. 

ವೆಬ್ದುನಿಯಾವನ್ನು ಓದಿ