ಕೇಂದ್ರ ಸಚಿವರಾಗಿ ಜವಾಬ್ದಾರಿಯಿಂದ ವರ್ತಿಸಿ: ಸಚಿವ ಜಾವ್ಡೇಕರ್‌ ವಿರುದ್ಧ ಉಪಸಭಾಪತಿ ಕಿಡಿ

ಶುಕ್ರವಾರ, 26 ಫೆಬ್ರವರಿ 2016 (21:23 IST)
ಸಂಸತ್ ಅಧಿವೇಶನದಲ್ಲಿ ನಡೆದ ಚರ್ಚಾಕೂಟದಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್ ತರಾಟೆಗೆ ತೆಗೆದುಕೊಂಡು ಸಚಿವರಾಗಿ ಜವಾಬ್ದಾರಿಯಿಂದ ವರ್ತಿಸಿ ಎಂದು ತಾಕೀತು ಮಾಡಿದ ಘಟನೆ ನಡೆಯಿತು.
  
ಜೆಎನ್‌ಯು ಮತ್ತು ಹೈದ್ರಾಬಾದ್ ವಿಶ್ವವಿದ್ಯಾಲಯ ಘಟನೆಗಳ ಬಗ್ಗೆ ಮಾತನಾಡಲು ಶಿವಸೇನೆ ಸಂಸದ ಸಂಜಯ್ ರಾವುತ್ ಅವರಿಗೆ ಸಮಯ ನಿಗದಿಪಡಿಸಿ ಎಂದು ಕುರಿಯನ್‌ಗೆ ಜಾವ್ಡೇಕರ್ ಒತ್ತಾಯಿಸಿದಾಗ, ಕುರಿಯನ್‌ರಿಂದ ತರಾಟೆಗೊಳಗಾದರು.
 
ನೀವು ಇತರರಿಗೆ ಹೆಚ್ಚಿನ ಸಮಯ ನೀಡಿದ್ದೀರಿ. ಅದರಂತೆ, ರಾವುತ್ ಅವರಿಗೂ ಹೆಚ್ಚಿನ ಸಮಯ ನೀಡಿ ಎಂದು ಜಾವ್ಡೇಕರ್ ಹೇಳಿದಾಗ ಆಕ್ರೋಶಗೊಂಡ ಕುರಿಯನ್, ಸಚಿವರಾಗಿ ಜವಾಬ್ದಾರಿಯಿಂದ ವರ್ತಿಸಿ. ಕೇಂದ್ರ ಸರಕಾರ ಸದನದಲ್ಲಿ ಮಸೂದೆ ಮಂಡಿಸಲಿರುವುದರಿಂದ ನಾನು ಹೆಚ್ಚಿನ ಸಮಯ ನೀಡಲು ಬಯಸಿದರೂ ಸಾಧ್ಯವಾಗುತ್ತಿಲ್ಲ ಎಂದು ತಿರುಗೇಟು ನೀಡಿದರು.  
 
ರಾಜ್ಯಸಭೆಯ ಸಭಾಪತಿ ಕುರಿಯನ್ ಮತ್ತು ಸಚಿವ ಜಾವ್ಡೇಕರ್ ಅವರ ನಡುವೆ ಉದ್ರಿಕ್ತ ವಾತಾವರಣ ಉಂಟಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ, ಸಚಿವರು ಸಹಕಾರ ನೀಡಲು ಬಯಸಿದ್ದಾರೆ ಎಂದು ಪರಿಸ್ಥಿತಿ ತಿಳಿಗೊಳಿಸಿದರು. 
 

ವೆಬ್ದುನಿಯಾವನ್ನು ಓದಿ