ಇದೀಗ ಬಿಜೆಪಿ, ಆರೆಸ್ಸೆಸ್ ವಿರೋಧಿಸುವುದು ಬಹುದೊಡ್ಡ ಅಪರಾಧದಂತೆ: ಅರವಿಂದ್ ಕೇಜ್ರಿವಾಲ್

ಶುಕ್ರವಾರ, 19 ಫೆಬ್ರವರಿ 2016 (14:07 IST)
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿವಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎನ್‌ಡಿಎ ಸರಕಾರ ಭಾರತೀಯ ಸಂವಿಧಾನದ ಹೊಸ ಭಾಷ್ಯೆ ಬರೆದಿದ್ದು ಅದರಡಿಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ವಿರೋಧಿಸುವುದು ಬಹು ದೊಡ್ಡ ಅಪರಾಧದಂತೆ ಎಂದು ಹೇಳಿದ್ದಾರೆ. 
 
ಕೇಂದ್ರ ಸರಕಾರದ ಹೊಸ ಸಂವಿಧಾನದ ಪ್ರಕಾರ ಒಂದು ವೇಳೆ, ನೀವು ಬಿಜೆಪಿಯವರಾಗಿದ್ದರೆ ಹತ್ಯೆ, ರೇಪ್, ಹಲ್ಲೆ ಮಾಡುವುದು ಅಪರಾಧವಲ್ಲ. ಬಿಜೆಪಿ, ಆರೆಸ್ಸೆಸ್ ವಿರೋಧಿಸುವುದು ಇದೀಗ ಬಹುದೊಡ್ಡ ಅಪರಾಧ ಎಂದು ಟ್ವೀಟ್ ಮಾಡಿದ್ದಾರೆ.
 
ಕಳೆದ ಗುರುವಾರದಂದು ಪಟಿಯಾಲಾ ಕೋರ್ಟ್‌ನಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿರುವಾಗ ದೆಹಲಿ ಪೊಲೀಸರು ಮೂಕ ಪ್ರೇಕ್ಷಕರಾಗಿರುವ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಕೇಂದ್ರ ಸರಕಾರ ಪ್ರಶ್ನಿಸುತ್ತಿದೆ ಎಂದರು.  
 
ದೇಶದ್ರೋಹಿಗಳನ್ನು ಗುಂಡಿಟ್ಟು ಹತ್ಯೆ ಮಾಡಿ, ಆದರೆ ದೇಶದ್ರೋಹಿಗಳ ಹೆಸರಲ್ಲಿ ಅಮಾಯಕ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುವುದು ಸರಿಯಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ