ಬೆಳಗಾವಿ ಗಡಿ ವಿವಾದ: ಗೃಹ ಸಚಿವರು ಮಧ್ಯ ಪ್ರವೇಶಿಸಲಿ

ಗುರುವಾರ, 10 ನವೆಂಬರ್ 2016 (10:41 IST)
ಮುಂಬೈ: ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಲು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಶಿವಸೇನೆ ಶಾಸಕಿ ನೀಲಮ್ ಗೋರ್ಹೆ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಬಹುಭಾಷಿಕರಾಗಿರುವ ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರಕಾರ ತೀವ್ರ ಅನ್ಯಾಯ ಮಾಡುತ್ತ ದೌರ್ಜನ್ಯ ಎಸಗುತ್ತಿದೆ. ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದಂದು ಅದನ್ನು ವಿರೋಧಿಸಿ ಕರಾಳ ದಿನಾಚರಣೆ ನಡೆಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಮೇಯರ್, ಉಪಮೇಯರ್ ಅವರನ್ನು ಅಧಿಕಾರದಿಂದ ಕಿತ್ತು ಹಾಕಲು ಹುನ್ನಾರ ನಡೆಸಿದೆ. ಎಂಇಎಸ್ ಕಾರ್ಯಕರ್ತರ ಮೇಲೆ ಕರ್ನಾಟಕ ಸರಕಾರ ಅಮಾನುಷವಾಗಿ ನಡೆಸಿಕೊಂಡು ಕರಾಳ ದಿನಾಚರಣೆಯಲ್ಲಿ ಭಾಗಿಯಾದ ನೆಪ ಮಾಡಿಕೊಂಡು ಬಂಧಿಸುತ್ತಿದೆ ಎಂದು ದೂರಿದ್ದಾರೆ.
 
ಕರ್ನಾಟಕದಲ್ಲಿ ನಡೆಯುತ್ತಿರುವ ಮರಾಠಿ ಭಾಷಿಕರ ದೌರ್ಜನ್ಯ ಅತೀವ ದುಃಖ ತಂದಿದೆ. ಇದನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗಮನಿಸಬೇಕು. ಈ ಬಗ್ಗೆ ಅಗತ್ಯ ಮಾಹಿತಿ ಪಡೆದು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಸರಕಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
 
ಮರಾಠಿಗರ ರಕ್ಷಣೆಗಾಗಿ ಹಾಗೂ ಮಹಾರಾಷ್ಟ್ರ ಏಕೀಕರಣದ ವಿಷಯದಲ್ಲಿ ಶಿವಸೇನೆ ಸದಾ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಾ ಬಂದಿದೆ ಎಂದಿರುವ ಅವರು, ಕರ್ನಾಟಕ ಸರಕಾರ ಬೆಳಗಾವಿ ಭಾಗದಲ್ಲಿ ಕಾಲಕಾಲಕ್ಕೆ ಮರಾಠಿ ಭಾಷಿಕರ ಮೇಲೆ ತನ್ನ ಪೊಲೀಸ್ ಬಲ ಉಪಯೋಗಿಸಿಕೊಂಡು ಮನ ಬಂದಂತೆ ಥಳಿಸುತ್ತಿದೆ ಹಾಗೂ ಚಿತ್ರಹಿಂಸೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ