ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಬಂಧನ

ಶುಕ್ರವಾರ, 29 ಜನವರಿ 2016 (21:32 IST)
ಓರ್ವ ಮಹಿಳೆ ಹತ್ಯೆಯಾಗಿ ಮೂವರು ಗಂಬೀರವಾಗಿ ಗಾಯಗೊಂಡ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಒಂದು ವರ್ಷದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
 
ಇಸ್ರೇಲ್ ನಿಯೋಗ ಕೋಕೋನಟ್ ಗ್ರೂವ್ ಬಾರ್‌ಗೆ ರಾತ್ರಿಯ ಔತಣಕೂಟಕ್ಕೆ ಭೇಟಿ ನೀಡಲಿದೆ ಎನ್ನುವ ಮಾಹಿತಿ ಪಡೆದ ಉಗ್ರರು, ಆರೋಪಿಗೆ ಬಾರ್‌ನೊಳಗೆ ಬಾಂಬ್ ಇಡುವಂತೆ ಸೂಚಿಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
 
ಚರ್ಚ್ ಸ್ಟ್ರೀಟ್ ಸ್ಫೋಟದ ಪ್ರಮುಖ ಆರೋಪಿ ಅಹ್ಮದಾಬಾದ್ ಮೂಲದ ಮೊಹಮ್ಮದ್ ರಫೀಕ್ ಅಲಿಯಾಸ್ ಜಾವೇದ್ ಅಲಿಯಾಸ್ ಆಲಂ ಜೆಬ್ ಆಫ್ರಿದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ. 
 
ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಿಯನ್ನು 10 ದಿನಗಳವರೆಗೆ ಎನ್‌ಐಎ ವಶಕ್ಕೆ ಒಪ್ಪಿಸಿದೆ. ಕೋಕೋನಟ್ ಗ್ರೂವ್ ಬಾರ್ ಎದುರಿಗಿರುವ ಜನಪ್ರಿಯ ಹೋಟೆಲ್‌ ಮುಂಭಾಗದಿಂದ ಸ್ಫೋಟಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ಸದಸ್ಯನಾಗಿರುವ ರಫೀಕ್, ಕೇರಳದ ವಾಗಾಮೋನ್‌ ಪ್ರದೇಶದಲ್ಲಿ ಯುವಕರಿಗೆ ಉಗ್ರವಾದದ ತರಬೇತಿ ನೀಡುತ್ತಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ