ಪ್ರಶಾಂತ್ ಭೂಷಣ್ ಬಿಜೆಪಿಗೆ ಸೇರ್ಪಡೆಗೊಳ್ಳಲಿ: ಆಪ್ ನಾಯಕರು ಕಿಡಿ

ಶನಿವಾರ, 28 ನವೆಂಬರ್ 2015 (19:52 IST)
ಆಮ್ ಆದ್ಮಿ ಪಕ್ಷದ ಲೋಕಪಾಲ್ ಮಸೂದೆಯನ್ನು ಜೋಕ್‌ಪಾಲ್ ಮಸೂದೆ ಎಂದು ಟೀಕಿಸಿದ್ದ ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ವಿರುದ್ಧ ಆಪ್ ನಾಯಕರು ತಿರುಗೇಟು ನೀಡಿ, ಬಿಜೆಪಿ ಪ್ರಚೋದನೆಯಿಂದ ಇಂತಹ ಹೇಳಿಕೆ ನೀಡುವ ಬದಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರೆ ಸೂಕ್ತ ಎಂದು ಕಿಡಿಕಾರಿದ್ದಾರೆ. 
 
ಅಣ್ಣಾ ಹಜಾರೆ ಚಳುವಳಿಯಲ್ಲಿದ್ದ ಜನಲೋಕಪಾಲ್ ಮಸೂದೆಯನ್ನೇ ಜಾರಿಗೊಳಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸದನದಲ್ಲಿ ಮಂಡಿಸಲಿದ್ದಾರೆ. ಮಸೂದೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. 
 
ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಮಸೂದೆಯನ್ನು ಜೋಕ್‌ಪಾಲ್ ಮಸೂದೆ ಎಂದು ಜರಿದ ಭೂಷಣ್, ಕೇಂದ್ರ ಸರಕಾರದೊಂದಿಗೆ ಸಂಘರ್ಷ ಮುಂದುವರಿಸಲು ಕೇಜ್ರಿವಾಲ್ ಇಂತಹ ಮಸೂದೆ ಜಾರಿಗೆ ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದ್ದರು.
 
ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ್ ಛಡ್ಡಾ ಮಾತನಾಡಿ, ಹಿಂದಿನ ಸರಕಾರದಲ್ಲಿ ಪ್ರಶಾಂತ್ ಭೂಷಣ್ ನಮ್ಮೊಂದಿಗಿದ್ದಾಗ ಮಂಡಿಸಿದ ಅದೇ ಲೋಕಪಾಲ್ ಮಸೂದೆಯನ್ನು ಮಂಡಿಸಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.   
 
ಹಿಂದಿನ ಆಪ್ ಸರಕಾರದಲ್ಲಿದ್ದಾಗ ಲೋಕಪಾಲ್ ಮಸೂದೆಯ ಬಗ್ಗೆ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ? ಇದೀಗ ಕೇಂದ್ರದಲ್ಲಿ ಬಿಜೆಪಿ ಸರಕಾರವಿರುವುದರಿಂದ ಲೋಕಪಾಲ್ ಅಧಿಕಾರಿಗಳು ಕೇಂದ್ರ ಸರಕಾರದ ಭ್ರಷ್ಟಾಚಾರಿಗಳನ್ನು ತನಿಖೆ ನಡೆಸುವುದು ಬೇಡವಾಗಿದೆ. ಭೂಷಣದ್ವಯರು ಬಿಜೆಪಿ ಹುನ್ನಾರದ ಮೇಲೆ ಹೇಳಿಕೆ ನೀಡುವ ಬದಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿ ಎಂದು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ