ಪಶ್ಚಿಮ ಬಂಗಾಳ ಸಿಐಡಿ ಹಾಗೂ ಬಿಹಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಿಹಾರ ಪಿಯುಸಿ ಪರೀಕ್ಷಾ ಹಗರಣದ ಮುಖ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಈಗಾಗಲೇ ಬಂಧಿತರಾಗಿದ್ದ ಆರೋಪಿಗಳು ನೀಡಿದ ಸುಳಿವನ್ನು ಆಧರಿಸಿ ಕಾರ್ಯಾಚರಣೆಗಿಳಿದ ಜಂಟಿ ತಂಡ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ವಿಕಾಸ್ ಕುಮಾರ್ (39)ನನ್ನು ಕೋಲ್ಕತ್ತಾದ ದಕ್ಷಿಣ ಪರಗಣ ಜಿಲ್ಲೆಯ ಜಿನ್‌ಜಿನ್‌ಜಿರಬಜಾರ್‌ನಲ್ಲಿ ಬಂಧಿಸಿದರು.
ಡಿಐಡಿ(ಸಿಐಡಿ) ದಿಲೀಪ್ ಅದಕ್ ಅವರು ನೀಡಿರುವ ಮಾಹಿತಿಯ ಪ್ರಕಾರ, ವಿಕಾಸ್, ಬಿಹಾರ್ ವಿದ್ಯಾಲಯ ಪರೀಕ್ಷಾ ಸಮಿತಿ ಗುಮಾಸ್ತ-ಕಮ್-ಕಾವಲುಗಾರನಾಗಿದ್ದ.
ಪ್ರಶ್ನೆಪತ್ರಿಕೆಗಳನ್ನು ಬದಲಿಸಲು ಆತ ಪ್ರತಿ ವಿದ್ಯಾರ್ಥಿಯಿಂದ 5 ರಿಂದ 10 ಲಕ್ಷ ಪಡೆದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನಾತ ಬಹಳ ಚಾಣಾಕ್ಷತೆಯಿಂದ ನಿರ್ವಹಿಸುತ್ತಿದ್ದ. ಆತನನ್ನು ಬಂಧಿಸಲು ಸಹಾಯ ಮಾಡಿ ಎಂದು ಬಿಹಾರ್ ಪೊಲೀಸರು ತಮ್ಮನ್ನು ಕೇಳಿದ್ದರು ಎಂದು ಅದಕ್ ಹೇಳಿದ್ದಾರೆ.
ಗುಜರಾತ್ ಕಂಪನಿಯೊಂದಕ್ಕೆ ಖಾಲಿ ಉತ್ತರ ಪತ್ರಿಕೆ ಮುದ್ರಿಸಿ ನೀಡುವಂತೆ ಕೇಳಿಕೊಂಡಿದ್ದ ಕುಮಾರ್, ಸುಮಾರು 28 ಲಾರಿಗಳಷ್ಟು ಖಾಲಿ ಉತ್ತರ ಪತ್ರಿಕೆಯನ್ನು ಅವರಿಂದ ತರಿಸಿದ್ದ. ಬಳಿಕ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಸಂಪರ್ಕಿಸಿ ಅವುಗಳನ್ನು ನೀಡುತ್ತಿದ್ದ. ಅವರು ಉತ್ತರ ಪತ್ರಿಕೆ ತುಂಬಿ ವಾಪಸ್ ನೀಡಿದ ಬಳಿಕ ಮೂಲ ಉತ್ತರ ಪತ್ರಿಕೆಯನ್ನು ಬದಲಾಯಿಸಿ ಇದನ್ನು ಇಡುತ್ತಿದ್ದ ಎಂದು ಸಿಐಡಿ ಡಿಜಿಪಿ ದಿಲೀಪ್ ಅದಕ್ ತಿಳಿಸಿದ್ದಾರೆ.
ಗುಜರಾತ್ ಪ್ರಿಂಟಿಂಗ್ ಪ್ರೆಸ್ ಬಿಹಾರ್ ವಿದ್ಯಾಲಯ ಪರೀಕ್ಷಾ ಸಮಿತಿ ತನ್ನ ಬಳಿ 9 ಕೋಟಿ ರೂ ನಷ್ಟು ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ದೂರು ನೀಡಿತ್ತು. ಅವರು ನೀಡಿದ ದೂರಿನ ವಿಚಾರಣೆ ನಡೆಸಿದಾಗ ಭಾರಿ ಹಗರಣ ಬಯಲಾಗಿದೆ.
ಹಗರಣದ ರೂವಾರಿ ವಿಕಾಸ್ ಪಾಟಲೀಪುತ್ರದ ನಿವಾಸಿಯಾಗಿದ್ದು ಇತ್ತೀಚಿಗೆ ಕೋಲ್ಕತ್ತಾದ ಫೂಲ್‌ಬಾಗನ್‌ನಲ್ಲಿ ಸುಮಾರು ಒಂದು ಕೋಟಿ ಮೌಲ್ಯದ ಫ್ಲಾಟ್ ಒಂದನ್ನು ಖರೀದಿಸಿದ್ದ ಎಂದು ತಿಳಿದು ಬಂದಿದೆ.
ಈ ಬಾರಿಯ ಬಿಹಾರ್ ಪಿಯು ಪರೀಕ್ಷಾ ಫಲಿತಾಂಶ ಬಹುದೊಡ್ಡ ಹಗರಣವನ್ನು ಬಹಿರಂಗ ಪಡಿಸಿತ್ತು. ಕಲಾ ವಿಭಾಗದಲ್ಲಿ ಟಾಪರ್ ಎನಿಸಿಕೊಂಡ ಬಾಲಕಿಯೋರ್ವಳು ರಾಜ್ಯಶಾಸ್ತ್ರ ಎಂದರೆ ಅಡುಗೆ ಮಾಡುವುದಕ್ಕೆ ಸಂಬಂಧಿಸಿದ ವಿಷಯ ಎಂದು ಹೇಳುವ ಮೂಲಕ ಸಂಪೂರ್ಣ ದೇಶಾದ್ಯಂತ ಬಿಹಾರ್ ಪಿಯುಸಿ ಪರೀಕ್ಷಾ ಅಕ್ರಮದ ಮೇಲೆ ಪ್ರಶ್ನೆ ಏಳುವುದಕ್ಕೆ ಕಾರಣಳಾಗಿದ್ದಳು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.