ಬಿಹಾರ್ ಚುನಾವಣೆ: ಲಾಲು ಯಾದವ್‌ರನ್ನು ಕಡೆಗೆಣಿಸುವ ಪ್ರಶ್ನೆಯೇ ಇಲ್ಲ ಎಂದ ಕಾಂಗ್ರೆಸ್

ಸೋಮವಾರ, 5 ಅಕ್ಟೋಬರ್ 2015 (15:28 IST)
ಬಿಹಾರ್ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ, ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್‌ರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ ಎನ್ನುವ ಆರೋಪಗಳನ್ನು ಕಾಂಗ್ರೆಸ್ ತಳ್ಳಿಹಾಕಿದೆ.
 
ಕಾಂಗ್ರೆಸ್, ಆರ್‌ಜೆಡಿ ಮತ್ತು ಜೆಡಿಯು ಜನತಾ ಪರಿವಾರದ ಅಡಿಯಲ್ಲಿ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದ್ದರೂ ಸೋನಿಯಾ ಮತ್ತು ರಾಹುಲ್, ಲಾಲು ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
 
ಒಂದು ವೇಳೆ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಕಾಣಿಸಿಕೊಂಡಲ್ಲಿ ಭ್ರಷ್ಟಾಚಾರ ಮತ್ತು ಭ್ರಷ್ಟ ನಾಯಕರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎನ್ನುವ ಅಪವಾದದಿಂದ ದೂರವಿರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  
 
ಲಾಲು ಯಾದವ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎನ್ನುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಆರ್‌ಜೆಡಿ ಪಕ್ಷ ತನ್ನದೇ ಆದ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದೆ. ಅದರಂತೆ, ಕಾಂಗ್ರೆಸ್ ಪಕ್ಷ ಕೂಡಾ ತನ್ನದೇ ಆದ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಷೀದ್ ಅಳ್ವಿ ಹೇಳಿದ್ದಾರೆ.
 
ಜನತಾ ಪರಿವಾರದ ಎಲ್ಲಾ ನಾಯಕರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದ ಮಾತ್ರಕ್ಕೆ ಮೈತ್ರಿಕೂಟದಲ್ಲಿ ಬಿರುಕಿದೆ ಎಂದರ್ಥವಲ್ಲ ಎಂದು ಕಾಂಗ್ರೆಸ್ ಮುಖಂಡ ರಷೀದ್ ಅಳ್ವಿ ಸ್ಪಷ್ಟಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ