ನಿತೀಶ್ ಕುಮಾರ್‌ಗೆ ತವರಿನಲ್ಲಿ ಮಣ್ಣು ಮುಕ್ಕಿಸಲು ಪ್ರಧಾನಿ ಮೋದಿ ರಣತಂತ್ರ

ಶುಕ್ರವಾರ, 31 ಜುಲೈ 2015 (16:03 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಎದುರಾಳಿಯಾಗಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್ ವಿರುದ್ಧ ಯುದ್ಧ ಘೋಷಿಸಿದ್ದಾರೆ.
 
ಬಿಹಾರ್‌ನ ರಾಜಕೀಯ ರಾಜಧಾನಿ ಎಂದು ಕರೆಯಲಾಗುವ ಮುಜಾಫರ್‌ಪುರ್‌ನಿಂದ ರಣಕಹಳೆ ಮೊಳಗಿಸಲು ಮೋದಿ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
 
ಒಂದು ವೇಳೆ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಬಹುಮತಗಳಿಸಿ ಅಧಿಕಾರಕ್ಕೆ ಬಂದಲ್ಲಿ ಮುಂಬರುವ ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶ ವಿಧಾನಸಭೆ ಚುನಾವಣೆಗಳ ಮೇಲೆ ಪಕ್ಷದ ಗೆಲುವಿನ ಪ್ರಭಾವ ಬೀರುತ್ತದೆ ಎನ್ನುವುದು ಬಿಜೆಪಿಯ ಚಿಂತನೆಯಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
 
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿವೆ ಅದರಂತೆ ಉತ್ತರಪ್ರದೇಶದಲ್ಲಿ 2017ರಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವುದರಿಂದ, ಬಿಹಾರ್ ಚುನಾವಣೆ ಯಾಕೆ ಗೆಲ್ಲಬೇಕು ಎಂದು ಬಯಸುವುದಕ್ಕೆ ಇಲ್ಲಿ ಉತ್ತರ ಸಿಕ್ಕಿದೆ.
 
ಚುನಾವಣೆ ಆಯೋಗ ಮತದಾನಕ್ಕೆ ದಿನಾಂಕ ಘೋಷಿಸುವ ಮುನ್ನವೇ ಪ್ರಧಾನಿ ಮೋದಿ ಮೂರು ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಬಿಜೆಪಿ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಶಕ್ತಿಯನ್ನು ಹೆಚ್ಚಿಸುವುದು. ರಾಜ್ಯದ ಆಗ್ನೇಯ ಭಾಗದಲ್ಲಿ ಮುಸ್ಲಿಮರು ಮತ್ತು ಯಾದವರು ನಿರ್ಣಾಯಕ ಸಮುದಾಯಗಳಾಗಿರುವುದರಿಂದ ಅವರನ್ನು ಓಲೈಸಲು ಬಿಜೆಪಿ ನಿರ್ಧರಿಸಿದೆ. ಆದರೆ, ಮುಸ್ಲಿಂ ಮತ್ತು ಯಾದವ್ ಸಮುದಾಯ ಇಲ್ಲಿಯವರೆಗೆ ಲಾಲು ಯಾದವ್‌ಗೆ ಬೆಂಬಲ ನೀಡುತ್ತಾ ಬಂದಿರುವುದು ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.   
 

ವೆಬ್ದುನಿಯಾವನ್ನು ಓದಿ