ಬಿಹಾರ್‌ನಲ್ಲಿ ಶೀಘ್ರದಲ್ಲಿಯೇ ಮದ್ಯ ಮಾರಾಟ ನಿಷೇಧ ಜಾರಿ

ಮಂಗಳವಾರ, 24 ನವೆಂಬರ್ 2015 (20:14 IST)
ಬಿಹಾರ್ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಶೀಘ್ರದಲ್ಲಿಯೇ ನಿಷೇಧ ಹೇರಲಾಗುವುದು ಎಂದು ಅಬಕಾರಿ ಖಾತೆ ಸಚಿವ ಅಬ್ದುಲ್ ಜಲೀಲ್ ಮಸ್ತಾನ್ ಹೇಳಿದ್ದಾರೆ.
 
ಅಬಕಾರಿ ಖಾತೆ ಸಚಿವರಾಗಿ ಅಧಿಕಾರವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಲೀಲ್, ಮದ್ಯ ಮಾರಾಟಕ್ಕೆ ನಿಷೇಧ ಹೇರಲು ಸರಕಾರ ಬದ್ಧವಾಗಿದೆ ಎಂದರು. 
 
ಬಿಹಾರ್‌ನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಮುಂಬರುವ ಆರು ತಿಂಗಳೊಳಗೆ ರಾಜ್ಯದಲ್ಲಿ ಸಂಪೂರ್ಣ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
 
ಕಳೆದ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಂದು ವೇಳೆ ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗುವುದು ಎಂದು ಘೋಷಿಸಿದ್ದರು. 
 
ಮದ್ಯ ಮಾರಾಟಕ್ಕೆ ನಿಷೇಧ ಹೇರುವಂತೆ ಮಹಿಳೆಯರು, ದಲಿತ ಮತ್ತು ಹಿಂದುಳಿದ ಸಮುದಾಯದವರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಜನತೆಯ ಹಿತವನ್ನು ಪರಿಗಣಿಸಿ ಸರಕಾರ ಮದ್ಯ ಮಾರಾಟಕ್ಕೆ ನಿಷೇಧ ಹೇರಲು ಮುಂದಾಗಿದೆ ಎಂದು ಅಬಕಾರಿ ಖಾತೆ ಸಚಿವ ಅಬ್ದುಲ್ ಜಲೀಲ್ ಮಸ್ತಾನ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ