ಬಲವಂತದ ಮತಾಂತರವನ್ನು ಬಿಜೆಪಿ ವಿರೋಧಿಸುತ್ತದೆ: ಅಮಿತ್ ಶಾ

ಶನಿವಾರ, 20 ಡಿಸೆಂಬರ್ 2014 (14:53 IST)
ಬಿಜೆಪಿ ಬಲವಂತದ ಮತಾಂತರವನ್ನು ವಿರೋಧಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 
ಕೊಚ್ಚಿಯಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಶಾ, ನಮ್ಮ ಪಕ್ಷ ಒತ್ತಾಯಪೂರ್ವಕ ಧರ್ಮಪರಿವರ್ತನೆಯನ್ನು ಬೆಂಬಲಿಸುವುದಿಲ್ಲ . ಆದ್ದರಿಂದ  ನಾವು  ಈ ಕುರಿತು ಕಾನೂನು ತರಲು ಹೊರಟಿದ್ದೇವೆ. ತಮ್ಮದು ಜಾತ್ಯಾತೀತ ಪಕ್ಷ ಎಂದು ಸಾರುವ ರಾಜಕೀಯ ಪಕ್ಷಗಳು ತಮ್ಮ ನಿಲುವು ಪ್ರಾಮಾಣಿಕವಾದದ್ದು ಎಂದಾದರೆ ಬಿಲ್ ಪಾಸ್ ಮಾಡಲು ಸಹಕಾರ ನೀಡಬೇಕು ಎಂದರು. 
 
ಹಿಂದೂ ಪರ ಸಂಘಟನೆ ಉತ್ತರ ಪ್ರದೇಶದಲ್ಲಿ ಬಲವಂತದ ಮತಾಂತರ ಮಾಡಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಆ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೊಳಪಡುತ್ತಿದೆ. ಈ ಕುರಿತು ನಾನು  ಕಮೆಂಟ್ ಮಾಡಲು ಬಯಸುವುದಿಲ್ಲ ಎಂದರು. 
 
ಬಿಜೆಪಿ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಆರೋಪವನ್ನು ತಳ್ಳಿಹಾಕಿದ ಅವರು, " ಇದು ನಿರಾಧಾರವಾದ ಆಕ್ಷೇಪ " ಎಂದಿದ್ದಾರೆ.
 
ಕಪ್ಪುಹಣದ ಕುರಿತು ಉಲ್ಲೇಖಿಸಿದ ಅವರು ವಿದೇಶಗಳಲ್ಲಿ ಕೂಡಿಟ್ಟಿರುವ ಕಾಳಧನವನ್ನು ಹಿಂತಿರುಗಿ ತರುವ ವಾಗ್ದಾನಕ್ಕೆ ನಮ್ಮ ಪಕ್ಷ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
 
ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸರಕಾರವನ್ನು ಸ್ಥಾಪಿಸಲಿದೆ ಎಂಬ ವಿಶ್ವಾಸ ಅವರದು. 
 
ಕೇರಳಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಶಾ, ಪಲಕ್ಕಾಡ್‌ನಲ್ಲಿ  ಮೆಗಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. 

ವೆಬ್ದುನಿಯಾವನ್ನು ಓದಿ