ಉ.ಪ್ರದೇಶ ಚುನಾವಣೆಗಾಗಿ ಬಿಜೆಪಿಯಿಂದ ರಾಮಮಂದಿರ ಜಪ ಆರಂಭ: ಮಾಯಾವತಿ

ಶುಕ್ರವಾರ, 15 ಜನವರಿ 2016 (15:24 IST)
ಕಳೆದ ಶುಕ್ರವಾರದಂದು ತಮ್ಮ 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಮಾಜಿ ಮುಖ್ಯಮಂತ್ರಿ ಮಾಯಾವತಿ, ಕೇಂದ್ರ ಸರಕಾರ ಕೋಮುವಾದಿಗಳಿಗೆ ದೇಶದಲ್ಲಿ ಕೋಮುಗಲಭೆ ಹಬ್ಬಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಆರೋಪಿಸಿದ್ದಾರೆ.
 
ಮುಂಬರುವ 2017ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರ ವಿಷಯವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ದೆಹಲಿ ಮತ್ತು ಬಿಹಾರ್ ರಾಜ್ಯಗಳಲ್ಲಿ ಮತದಾರರು ಪ್ರಧಾನಿ ಮೋದಿ ಸರಕಾರಕ್ಕೆ ಕಲಿಸಿದ ತಕ್ಕ ಪಾಠವನ್ನು ಉತ್ತರಪ್ರದೇಶ ರಾಜ್ಯದ ಜನತೆ ಕಲಿಸಲಿದ್ದಾರೆ ಎಂದರು.
 
ಉತ್ತರಪ್ರದೇಶ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಸುಪ್ರೀಂಕೋರ್ಟ್‌ನಲ್ಲಿ ನೆನೆಗುದಿಗೆ ಬಿದ್ದಿರುವ ರಾಮಮಂದಿರ ವಿಷಯವನ್ನು ಬಿಜೆಪಿ, ಆರೆಸ್ಸೆಸ್ ಮತ್ತು ಇತರ ಸಂಘಟನೆಗಳು ಪ್ರಸ್ತಾಪಿಸುತ್ತಿವೆ ಎಂದು ಕಿಡಿಕಾರಿದರು.
 
ಕೇವಲ ಮತಗಳನ್ನು ಪಡೆಯಲು ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಮತದಾರರು ಇಂತಹ ಶಕ್ತಿಗಳಿಂದ ಎಚ್ಚರವಹಿಸಬೇಕು ಎಂದು ಕರೆ ನೀಡಿದರು.
 
ಪ್ರಧಾನಿ ಮೋದಿ ಕೇವಲ ವಾರಣಾಸಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದರು.
 
ಮೋದಿ, ದೆಹಲಿ ಮತ್ತು ಬಿಹಾರ್‌ನಲ್ಲಿ ನಾಟಕ ಮಾಡಿದಂತೆ ಮಾಡಲು ಹೊರಟಿದ್ದಾರೆ. ಆದರೆ, ಉತ್ತರಪ್ರದೇಶದ ಜನತೆ ಇಂತಹ ತಂತ್ರಗಳಿಗೆ ಮಾರುಹೋಗುವುದಿಲ್ಲ, ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಗುಡುಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ